ರಾಜಸ್ಥಾನ: ನ್ಯಾಯಾಧೀಶೆಗೆ ತಿರುಚಿದ ಆಕ್ಷೇಪಾರ್ಹ ಚಿತ್ರಗಳನ್ನು ಕಳುಹಿಸಿ 20 ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪಿ
ಈ ಸಂಬಂಧ ಫೆಬ್ರವರಿ 28ರಂದು ಪ್ರಕರಣ ದಾಖಲಾಗಿತ್ತು. ಈವರೆಗೆ ಯಾವ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರ, ಮಾರ್ಚ್ 09: ವ್ಯಕ್ತಿಯೊಬ್ಬ ಮಹಿಳಾ ನ್ಯಾಯಾಧೀಶರಿಗೆ ಅವರ ತಿರುಚಿದ ಛಾಯಾಚಿತ್ರಗಳನ್ನು ಕಳುಹಿಸಿ ಬ್ಲಾಕ್‌ಮೇಲ್ ಮಾಡಿದ್ದು, 20 ಲಕ್ಷ ರೂಪಾಯಿ ಕೊಡದಿದ್ದರೇ ಅವುಗಳನ್ನು ಸಾಮಾಜಿಕ ಜಾಲತಾಣಗಳಳಲ್ಲಿ ಹಾಕಿ ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ನ್ಯಾಯಾಧೀಶೆಯನ್ನು ಬ್ಲಾಕ್‌ಮೇಲ್ ಮಾಡಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಧೀಶರ ಛಾಯಾಚಿತ್ರಗಳನ್ನು ಆಕೆಯ ಸಾಮಾಜಿಕ ಮಾಧ್ಯಮ ಖಾತೆಯಿಂದ ಡೌನ್‌ಲೋಡ್ ಮಾಡಿ, ಎಡಿಟ್ ಮಾಡಿ ನ್ಯಾಯಾಲಯದಲ್ಲಿರುವ ಅವರ ಕಚೇರಿಗೆ ಮತ್ತು ಅವರ ಮನೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಫೆಬ್ರವರಿ 28ರಂದು ಪ್ರಕರಣ ದಾಖಲಾಗಿತ್ತು. ಈವರೆಗೆ ಯಾವ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ, ಫೆಬ್ರವರಿ 7 ರಂದು, ನ್ಯಾಯಾಧೀಶರ ಕೊಠಡಿಗೆ ಬಂದಿದ್ದ ವ್ಯಕ್ತಿ ಸ್ಟೆನೋಗ್ರಾಫರ್ ಕೈಯಲ್ಲಿ ಪಾರ್ಸೆಲ್ ನೀಡಿದ್ದಾರೆ. ಸ್ಟೆನೋಗ್ರಾಫರ್ ಅವರ ಹೆಸರು ಕೇಳಿದಾಗ ಅವರು ಹೇಳದೇ ಹೊರಟುಹೋಗಿದ್ದಾರೆ.
ಪಾರ್ಸೆಲ್‌ನಲ್ಲಿ ಕೆಲವು ಸಿಹಿತಿಂಡಿಗಳು, ನ್ಯಾಯಾಧೀಶರ ತಿರುಚಿದ ಅಶ್ಲೀಲ ಛಾಯಾಚಿತ್ರಗಳು ಮತ್ತು ಪತ್ರವಿತ್ತು. ಆಕೆ 20 ಲಕ್ಷ ರೂಪಾಯಿ ನೀಡದಿದ್ದರೆ ಫೋಟೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ. "20 ಲಕ್ಷ ರೂ.ಗಳೊಂದಿಗೆ ಸಿದ್ಧರಾಗಿರಿ, ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹಾಳುಮಾಡಬೇಕಾಗುತ್ತದೆ. ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು" ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದೇ ರೀತಿಯ ವಸ್ತುಗಳನ್ನು ಹೊಂದಿರುವ ಮತ್ತೊಂದು ಪಾರ್ಸೆಲ್ 20 ದಿನಗಳ ನಂತರ ನ್ಯಾಯಾಧೀಶರ ನಿವಾಸಕ್ಕೆ ಕಳುಹಿಸಲಾಗಿದೆ. ಹೀಗಾಗಿ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ತೆಗೆದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ 20 ರ ಹರೆಯದ ವ್ಯಕ್ತಿಯೊಬ್ಬರು ಪಾರ್ಸೆಲ್ ಅನ್ನು ನ್ಯಾಯಾಧೀಶರ ಕೋಣೆಗೆ ತಲುಪಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications