ಜಿರಳೆ ಹೋರಾಟಕ್ಕೆ ಜಯ: ರಾಜಸ್ಥಾನದ ಶಿಥಿಲಗೊಂಡ ಶಾಲೆಗೆ ₹18 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ!
ಜೈಪುರ: ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ ನಡೆಸುತ್ತಿರುವ 'School Thik Karo' ಅಭಿಯಾನಕ್ಕೆ ಇದೀಗ ಮಹತ್ವದ ಗೆಲುವು ಸಿಕ್ಕಿದೆ. ಜೈಪುರದ ರಾಮಪುರ ಕನ್ವರ್ಪುರ ಗ್ರಾಮದ ಶಿಥಿಲಗೊಂಡ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡದ ಕಾಮಗಾರಿ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ.
ರಾಜಸ್ಥಾನದ ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರದ ರಾಮಪುರ ಕನ್ವರ್ಪುರ ಗ್ರಾಮದ ಶಿಥಿಲಗೊಂಡ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಶುಕ್ರವಾರ ಶಾಲೆಗೆ ಭೇಟಿ ನೀಡಿದ್ದ ಕಾಕ್‌ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರ ಮೇಲೆ ದಾಳಿ ನಡೆದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.

ಆಗಸ್ಟ್ 22ರ ಹೊರಡಿಸಿರುವ ಆದೇಶದ ಪ್ರಕಾರ, ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ 2026ರ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಕಲಿಕಾ ವಾತಾವರಣ ಒದಗಿಸುವ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.ಹೊಸ ಕಟ್ಟಡಕ್ಕಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (DMFT)ನಿಂದ ₹12 ಲಕ್ಷ ಹಾಗೂ ಶಾಸಕರ ನಿಧಿಯಿಂದ ₹6 ಲಕ್ಷ ಮಂಜೂರು ಮಾಡಲಾಗಿದೆ. ಒಟ್ಟು ₹18 ಲಕ್ಷ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಮೀಸಲಿಡಲಾಗಿದೆ.
ರಾಮಪುರ ಕನ್ವರ್ಪುರ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು 2025ರ ಸೆಪ್ಟೆಂಬರ್‌ನಲ್ಲಿ ಶಿಥಿಲಗೊಂಡ ಕಟ್ಟಡ ಎಂದು ಘೋಷಿಸಲಾಗಿತ್ತು. ಬಳಿಕ ಕಟ್ಟಡವನ್ನು ಬಳಕೆಯಿಂದ ಹೊರಗಿಡಲಾಗಿತ್ತು. ವಿದ್ಯಾರ್ಥಿಗಳ ತರಗತಿಗಳು ಮುಂದುವರಿಯಲು ಸ್ಥಳೀಯ ಗ್ರಾಮಸ್ಥರು ಎರಡು ಕೊಠಡಿಗಳು ಹಾಗೂ ಟಿನ್ ಶೆಡ್ ವ್ಯವಸ್ಥೆ ಮಾಡಿದ್ದರು. ಇದರ ನಡುವೆ ಶುಕ್ರವಾರ CJP ಕಾರ್ಯಕರ್ತರು ಶಾಲೆಯ ಪರಿಸ್ಥಿತಿ ಪರಿಶೀಲಿಸಲು ತೆರಳಿದ್ದ ವೇಳೆ ಸ್ಥಳೀಯರ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ ಎಂದು ಪಕ್ಷ ಆರೋಪಿಸಿದೆ.
ಈ ಬೆಳವಣಿಗೆಯನ್ನು CJP ತನ್ನ 'School Thik Karo' ಅಭಿಯಾನದ ಗೆಲುವು ಎಂದು ಬಣ್ಣಿಸಿದೆ. ಪಕ್ಷದ ಸಹ ಸಂಚಾಲಕ ಆಶುತೋಷ್ ರಾಂಕಾ ಅವರು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಮೂಲಸೌಕರ್ಯ ಸುಧಾರಣೆಯಾಗುವವರೆಗೆ ಅಭಿಯಾನ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ, ರಾಜಸ್ಥಾನ ಸರ್ಕಾರ ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಮೂರು ವರ್ಷಗಳ ₹12,500 ಕೋಟಿ ಯೋಜನೆ ರೂಪಿಸಿದೆ. 2026-27ರಿಂದ 2028-29ರವರೆಗೆ 41 ಜಿಲ್ಲೆಗಳಲ್ಲಿ ಹೊಸ ಶಾಲಾ ಕಟ್ಟಡಗಳು, ತರಗತಿ ಕೊಠಡಿಗಳು, ದುರಸ್ತಿ ಕಾಮಗಾರಿ, ಶೌಚಾಲಯಗಳು ಹಾಗೂ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ಯೋಜನೆಯಡಿ 3,587 ಹೊಸ ಶಾಲಾ ಕಟ್ಟಡಗಳಿಗೆ ₹2,487.75 ಕೋಟಿ, 83,783 ಹೊಸ ತರಗತಿ ಕೊಠಡಿಗಳಿಗೆ ₹8,378.30 ಕೋಟಿ, 22,589 ಶಾಲೆಗಳ ಪ್ರಮುಖ ದುರಸ್ತಿಗೆ ₹1,129.45 ಕೋಟಿ ಹಾಗೂ 13,616 ಹೊಸ ಶೌಚಾಲಯ ಸಂಕೀರ್ಣಗಳಿಗೆ ₹340.40 ಕೋಟಿ ವೆಚ್ಚ ಮಾಡುವ ಪ್ರಸ್ತಾವವಿದೆ.
ಇದರ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಸೌಲಭ್ಯಗಳನ್ನು ಹೆಚ್ಚಿಸಲು ಡಿಸೆಂಬರ್ 2026ರೊಳಗೆ ಸುಮಾರು ₹1,087 ಕೋಟಿ ವೆಚ್ಚ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇದರಲ್ಲಿ 9,000 ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, 80,000 ಟ್ಯಾಬ್ಲೆಟ್‌ಗಳು ಮತ್ತು 7,000 ICT ಲ್ಯಾಬ್‌ಗಳ ಸ್ಥಾಪನೆಯೂ ಸೇರಿದೆ.


Click it and Unblock the Notifications
