
ರಾಜಸ್ಥಾನ: ದಲಿತ ವ್ಯಕ್ತಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ದುಷ್ಕರ್ಮಿಗಳು
ಜೈಪುರ್ ನವೆಂಬರ್ 25: ದಲಿತರ ಮೇಲಿನ ದೌರ್ಜನ್ಯದ ಮತ್ತೊಂದು ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಎಲೆಕ್ಟ್ರಿಷಿಯನ್‌ಗೆ ಥಳಿಸಿ ಮೂತ್ರ ಕುಡಿಸಿದ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಲಿಪಶುವನ್ನು ಭರತ್ ಕುಮಾರ್ (38) ಎಂದು ಗುರುತಿಸಲಾಗಿದೆ. ಈತನನ್ನು ಪುರುಷರ ಗುಂಪೊಂದು ಮನಬಂದಂತೆ ಥಳಿಸಿದೆ. ದಾಳಿ ಮಾಡಿದ ಒಬ್ಬರಲ್ಲಿ ವಿಡಿಯೋವನ್ನು ಸೆರೆ ಹಿಡಿದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಮಾರ್ ಅವರು ಕೆಲವು ವಿದ್ಯುತ್ ಕೆಲಸಗಳನ್ನು ಮಾಡಿ 21,100 ರೂ ಬಿಲ್ ಅನ್ನು ರಚಿಸಿದ್ದರು. ಅವರಿಗೆ 5,000 ರೂಪಾಯಿಯನ್ನು ನ.19ರಂದು ಮಧ್ಯಾಹ್ನ ಡಾಬಾವೊಂದಕ್ಕೆ ತೆರಳಿ ಪಡೆದು ಉಳಿದ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ರಾತ್ರಿ 9 ಗಂಟೆಗೆ ಅವರನ್ನು ಬರಲು ಹೇಳಲಾಗಿತ್ತು. ರಾತ್ರಿ 9.10ರ ಸುಮಾರಿಗೆ ವಾಪಸ್ ಹೋದಾಗ ಹಣ ನೀಡದ ಪುರುಷರ ಗುಂಪು ಕಾದು ಕುಳಿತಿದ್ದರು. ಆತ ಹೋಗಿ ಹಣ ಕೇಳಿದಾಗ ಆತನನ್ನು ಥಳಿಸಿದ್ದಾರೆ. ಬಳಿಕ ಆತನಿಗೆ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಆದರೆ ಇದನ್ನು ಗುಂಪಿನಲ್ಲಿರುವವರೇ ವಿಡಿಯೋ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿರೋಹಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ದಿನೇಶ್ ಕುಮಾರ್ ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.

ತಿಂಗಳಲ್ಲಿ ಎರಡನೇ ಘಟನೆ
ಒಂದು ತಿಂಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ ನವೆಂಬರ್ 7 ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ಕೊಳವೆಬಾವಿಯಿಂದ ನೀರು ಸೇದಿದ್ದಕ್ಕಾಗಿ 46 ವರ್ಷದ ದಲಿತ ವ್ಯಕ್ತಿಯನ್ನು ಹೊಡೆದು ಸಾಯಿಸಲಾಗಿತ್ತು. ಆರೋಪಿಗಳು ಕಿಶನ್‌ಲಾಲ್ ಭೀಲ್ (46) ಮೇಲೆ ಜಾತಿ ನಿಂದನೆ ಮಾಡಿದ್ದರು. ಅವರನ್ನು ಥಳಿಸಿದ್ದರು. ಇದರಿಂದ ಅವರು ಸಾವನ್ನಪ್ಪಿದ್ದರು. ತೀವ್ರ ಗಾಯಗೊಂಡಿದ್ದ ಕಿಶನ್‌ಲಾಲ್ ಅವರನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯಲು ಬಿಡಲಿಲ್ಲ ಎಂದು ಅವರ ಸಹೋದರ ಅಶೋಕ್ ಆರೋಪಿಸಿದ್ದರು. ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ, ಆರ್ಥಿಕ ಪರಿಹಾರ ಮತ್ತು ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿ, ಭಿಲ್ ಅವರ ಕುಟುಂಬ ಮತ್ತು ಸಮುದಾಯದವರು ಪ್ರತಿಭಟನೆ ನಡೆಸಿದರು.