Rajasthan Election 2023: ರಾಜಸ್ಥಾನ ಚುನಾವಣೆಯ ವೇಳಾಪಟ್ಟಿ, ದಿನಾಂಕ, ಸಮಯ, ವಿವರ ತಿಳಿಯಿರಿ
ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ರಾಜಸ್ಥಾನ ಚುನಾವಣೆಯು ನವೆಂಬರ್ 23 ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಸೋಮವಾರ (ಅಕ್ಟೋಬರ್ 9) 2023 ರ ದಿನಾಂಕವನ್ನು ಪ್ರಕಟಿಸಿದೆ. ರಾಜಸ್ಥಾನ ವಿಧಾನಸಭೆಯಲ್ಲಿ 200 ಸದಸ್ಯರಿದ್ದು, ಎಲ್ಲಾ ಸ್ಥಾನಗಳಿಗೂ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಕ್ಟೋಬರ್ 30 ಚುನಾವಣೆಯ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗುವುದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 6 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನವೆಂಬರ್ 7 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ಇನ್ನೂ ಅಭ್ಯರ್ಥಿಗಳು ನವೆಂಬರ್ 9 ರೊಳಗೆ ಚುನಾವಣೆಯಿಂದ ತಮ್ಮ ಹೆಸರನ್ನು ಹಿಂಪಡೆಯಬಹುದಾಗಿದೆ. ಇನ್ನೂ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಲಾಗುತ್ತದೆ. ಡಿಸೆಂಬರ್ 5ರೊಳಗೆ ಚುನಾವಣೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಂಬರುವ 2023ರ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತ್ತು ಈ ಕ್ಷಣದಿಂದಲೇ ಎಲ್ಲಾ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ 940 ಅಂತರರಾಜ್ಯ ಗಡಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದೆ. ಚುನಾವಣಾ ದಿನಾಂಕ ಘೋಷಣೆಗೆ ಮುಂಚಿತವಾಗಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮತದಾರರನ್ನು ಓಲೈಸಲು ಮತ್ತು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ದಶಕದ ಹಳೆಯ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಜನರಿಗೆ ಹಲವಾರು ಕಲ್ಯಾಣ ಘೋಷಣೆಗಳನ್ನು ಮಾಡಿದ್ದಾರೆ. ಮತ್ತೊಂದೆಡೆ, ಬಿಜೆಪಿಯು ಮೋದಿಯ ಮ್ಯಾಜಿಕ್, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿಚಾರಗಳನ್ನೇ ಚುನಾವಣೆಗೆ ಅಸ್ತ್ರವಾಗಿ ಬಳಸಿಕೊಳ್ಳಲು ಪಣತೊಟ್ಟಿದೆ. ಇನ್ನೂ ರಾಜಸ್ಥಾನ ವಿಧಾನಸಭೆಯು ಒಟ್ಟು 200 ಸ್ಥಾನಗಳನ್ನು ಹೊಂದಿದೆ. ಈ ಹಿಂದೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 108 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 70 ಸ್ಥಾನಗಳನ್ನು ಗಳಿಸಿತ್ತು.
ಪಂಚ ರಾಜ್ಯಗಳಲ್ಲೂ ಚುನಾವಣಾ ತಯಾರಿ ಭರ್ಜರಿಯಾಗಿದ್ದು, ಐದು ರಾಜ್ಯಗಳಲ್ಲೂ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ. ಅಲ್ಲದೇ ಒಂದೆರಡು ಸುತ್ತಿನ ಪ್ರಚಾರ ಕಾರ್ಯ, ಸಮಾವೇಶಗಳು ಈಗಾಗಲೇ ಮುಕ್ತಾಯಗೊಂಡಿದೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮುಖಾಮುಖಿ ಹೋರಾಟ ನಡೆಯಲಿದೆ.












Click it and Unblock the Notifications