ಉತ್ತರಾಖಂಡದ ಹಿಮಾಚಲದಲ್ಲಿ ಮಳೆಯ ಆರ್ಭಟ: 81 ಸಾವು, ಪಂಜಾಬ್‌ನಲ್ಲಿ ಹಠಾತ್ ಪ್ರವಾಹ!
ಬಿಟ್ಟು ಬಿಡದೆ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಎರಡು ರಾಜ್ಯಗಳು ತತ್ತರಿಸಿ ಹೋಗಿವೆ. ವರುಣನ ಅರ್ಭಟಕ್ಕೆ ಗುಡ್ಡ ಕುಸಿದು ಪ್ರಮುಖ ರಸ್ತೆಗಳು ಬಂದ್ ಆಗಿವೆ. ಅನೇಕ ಮನೆ ಮರಗಳು ಧರೆಗೆ ಉರುಳಿವೆ. ಅಪಾರ ಆಸ್ತಿ ಜೀವ ಹಾನಿ ಸಂಭವಿಸಿದೆ.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ 81 ಜನರು ಸಾವನ್ನಪ್ಪಿದ್ದಾರೆ. ಹಲವಾರು ಸ್ಥಳಗಳಲ್ಲಿ ಮನೆ ಕುಸಿತದಿಂದ ದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ. ಮುಂದಿನ ಕೆಲವು ದಿನಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಮಾಚಲ ಮಳೆ: ಸಾವಿನ ಸಂಖ್ಯೆ 71ಕ್ಕೆ ಏರಿಕೆ
ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಬುಧವಾರ ಮೃತರ ಸಂಖ್ಯೆ 71ಕ್ಕೆ ಏರಿಕೆಯಾಗಿದ್ದು, ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆ. "ಕಳೆದ ಮೂರು ದಿನಗಳಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಭಾನುವಾರ ರಾತ್ರಿಯಿಂದ ಒಟ್ಟು 57 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪ್ರಧಾನ ಕಾರ್ಯದರ್ಶಿ (ಕಂದಾಯ) ಓಂಕಾರ್ ಚಂದ್ ಶರ್ಮಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಾನುವಾರದಿಂದ ಗುಡ್ಡಗಾಡು ರಾಜ್ಯದಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಶಿಮ್ಲಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ಸಮ್ಮರ್ ಹಿಲ್, ಫಾಗ್ಲಿ ಮತ್ತು ಕೃಷ್ಣ ನಗರಗಳು ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮುಂಗಾರು ಪ್ರಾರಂಭವಾದಾಗಿನಿಂದ (ಜೂನ್ 24) ರಾಜ್ಯದಲ್ಲಿ ಒಟ್ಟು 214 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಸಮ್ಮರ್ ಹಿಲ್ ಮತ್ತು ಕೃಷ್ಣ ನಗರ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಮ್ಮರ್ ಹಿಲ್ ಸೈಟ್‌ನಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಸಮ್ಮರ್ ಹಿಲ್‌ನಿಂದ 13, ಫಾಗ್ಲಿಯಿಂದ ಐದು ಮತ್ತು ಕೃಷ್ಣನಗರದಿಂದ ಎರಡು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರದಂದು ಕುಸಿದು ಬಿದ್ದ ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದ ಅವಶೇಷಗಳಲ್ಲಿ ಕೆಲವು ದೇಹಗಳು ಹೂತುಹೋಗಿವೆ ಎಂಬ ಶಂಕೆ ಇದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಭೀತಿಯಲ್ಲಿ ಕೃಷ್ಣಾ ನಗರದಲ್ಲಿನ ಸುಮಾರು 15 ಮನೆಗಳನ್ನು ತೆರವುಗೊಳಿಸಲಾಗಿದ್ದು, ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ. ಪಾರುಗಾಣಿಕಾ ಪ್ರಯತ್ನಗಳು ನಡೆಯುತ್ತಿವೆ.
ಕಳೆದ 24 ಗಂಟೆಗಳಲ್ಲಿ ಕಾಂಗ್ರಾ ಜಿಲ್ಲೆಯ ಇಂದೋರಾ ಮತ್ತು ಫತೇಪುರ್ ಉಪವಿಭಾಗಗಳ ಪ್ರವಾಹ ಪೀಡಿತ ಪ್ರದೇಶಗಳಿಂದ 1,731 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಪುನ್ ಜಿಂದಾಲ್ ಬುಧವಾರ ತಿಳಿಸಿದ್ದಾರೆ. ವಾಯುಪಡೆಯ ಹೆಲಿಕಾಪ್ಟರ್‌ಗಳು, ಸೇನಾ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ನೆರವಿನೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಹಿಮಾಚಲ ಪ್ರದೇಶ ಈ ವರ್ಷ 54 ದಿನಗಳ ಮಾನ್ಸೂನ್‌ನಲ್ಲಿ ಈಗಾಗಲೇ 742 ಮಿಮೀ ಮಳೆಯನ್ನು ದಾಖಲಿಸಿದೆ. ಇದು ಜೂನ್ 1 ಮತ್ತು ಸೆಪ್ಟೆಂಬರ್ 30 ರ ನಡುವೆ ಋತುವಿನ ಸರಾಸರಿ 730 ಮಿಮೀ ದಾಖಲಾಗಿದೆ. ಈ ಜುಲೈನಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಳೆಯು ಕಳೆದ 50 ವರ್ಷಗಳಲ್ಲಿ ತಿಂಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಶಿಮ್ಲಾ ಹವಾಮಾನ ಕೇಂದ್ರದ ನಿರ್ದೇಶಕ ಸುರೀಂದರ್ ಪಾಲ್ ಪಿಟಿಐಗೆ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಮಳೆ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಸೋಮವಾರ ಭಾರೀ ಮಳೆಯ ನಂತರ ಭೂಕುಸಿತ ಸಂಭವಿಸಿದ ಉತ್ತರಾಖಂಡದ ಲಕ್ಷ್ಮಣ್ ಜುಲಾದಲ್ಲಿನ ರೆಸಾರ್ಟ್‌ನಲ್ಲಿ ದಂಪತಿಗಳು ಮತ್ತು ಅವರ ಮಗ ಸೇರಿದಂತೆ ನಾಲ್ಕು ಶವಗಳನ್ನು ಅವಶೇಷಗಳಿಂದ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ತಡರಾತ್ರಿ ಎರಡು ಮೃತದೇಹಗಳು ಮತ್ತು ಬುಧವಾರ ಇನ್ನೆರಡು ಮೃತದೇಹಗಳು ಪತ್ತೆಯಾಗಿವೆ ಎಂದು ಪೌರಿ ಎಸ್‌ಎಸ್‌ಪಿ ಕಚೇರಿ ತಿಳಿಸಿದೆ.
ಈ ನಾಲ್ಕು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.
ಅಮ್ಸೌರ್‌ನಲ್ಲಿ ಭೂಕುಸಿತದ ಅವಶೇಷಗಳಿಂದ ಪೌರಿ-ಕೋಟ್‌ದ್ವಾರ-ದುಗಡ್ಡಾ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದರೊಂದಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವು ಪಿಪಾಲ್ಕೋಟಿ ಭರೆನ್ಪಾನಿ ಬಳಿ ಕೊಚ್ಚಿಹೋಗಿದೆ.
ಪಂಜಾಬ್‌ನಲ್ಲಿ ಪ್ರವಾಹ
ಪಾಂಗ್ ಮತ್ತು ಭಾಕ್ರಾ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದ್ದು ಹೋಶಿಯಾರ್‌ಪುರ, ಗುರುದಾಸ್‌ಪುರ ಮತ್ತು ರೂಪನಗರ ಜಿಲ್ಲೆಗಳ ಹಲವು ಪ್ರದೇಶಗಳು ಮುಳುಗಡೆಯಾಗುವುದರೊಂದಿಗೆ ಪಂಜಾಬ್ ಪ್ರವಾಹವನ್ನು ಎದುರಿಸುತ್ತಿದೆ.
ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕ್ರಮವಾಗಿ 1,677 ಅಡಿ ಮತ್ತು 1,398 ಅಡಿಗಳಿವೆ ಎಂದು ಹೇಳಿದರು.












Click it and Unblock the Notifications