ರೈಲ್ವೆಗೆ ಕೊರೊನಾ ಹೊಡೆತ; ವಾರಕ್ಕೆ 450 ಕೋಟಿ ನಷ್ಟ
ಹೈದರಾಬಾದ್, ಮಾರ್ಚ್ 19 : ಕೊರೊನಾದಿಂದ ಉಂಟಾಗಿರುವ ಆತಂಕದಿಂದಾಗಿ ಜನರ ಸಂಚಾರ ಕಡಿಮೆಯಾಗಿದೆ. ವಿವಿಧ ರಾಜ್ಯಗಳ ಸಾರಿಗೆ ನಿಗಮಗಳು ಮಾತ್ರವಲ್ಲ, ಭಾರತೀಯ ರೈಲ್ವೆಗೂ ಪ್ರಯಾಣಿಕರ ಕೊರತೆ ಬಿಸಿ ತಟ್ಟಿದೆ.
ಕಳೆದ ಒಂದು ವಾರದಲ್ಲಿ ಭಾರತೀಯ ರೈಲ್ವೆ ಸುಮಾರು 450 ಕೋಟಿ ನಷ್ಟವನ್ನು ಅನುಭವಿಸಿದೆ. 184 ರೈಲುಗಳ ಸಂಚಾರವನ್ನು ಪ್ರಯಾಣಿಕರ ಕೊರತೆಯ ಕಾರಣ ರದ್ದುಗೊಳಿಸಲಾಗಿದೆ. ಬುಧವಾರ 99 ರೈಲುಗಳು ರದ್ದಾಗಿವೆ.
ಮಂಗಳವಾರ ದೇಶದ ಪ್ರಮುಖ ಮಾರ್ಗಗಳ 85 ರೈಲುಗಳನ್ನು ರದ್ದು ಮಾಡಲಾಗಿತ್ತು. ಪಶ್ಚಿಮ ಮತ್ತು ಸೆಂಟ್ರಲ್ ವಲಯಗಳಲ್ಲಿಯೇ ಅಧಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಕೆ ಮಾಡಿದರೆ ರೈಲ್ವೆಯಲ್ಲಿನ ಬುಕ್ಕಿಂಗ್ ಕ್ಯಾನ್ಸಲ್ ಶೇ 80ಕ್ಕೆ ಏರಿಕೆಯಾಗಿದೆ. ರದ್ದುಗೊಂಡ ರೈಲುಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಯಾವುದೇ ಶುಲ್ಕವಿಲ್ಲದೇ ಪೂರ್ಣ ಹಣವನ್ನು ವಾಪಸ್ ನೀಡಲಾಗುತ್ತಿದೆ.
ವಿವಿಧ ವಲಯಗಳ ಹಿರಿಯ ಅಧಿಕಾರಿಗಳ ಜೊತೆ ರೈಲ್ವೆ ಇಲಾಖೆ ಸಭೆಯನ್ನು ನಡೆಸಿದೆ. ಕೊರೊನಾ ಹರಡದಂತೆ ತಡೆಯಲು ರೈಲ್ವೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ. ಜನರಿಗೆ ಅರಿವು ಮೂಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಕೊರೊನಾ ತಡೆಗೆ 'Covid -19 rapid response team' ಎಂಬ 6 ಜನರ ತಂಡವೊಂದನ್ನು ರಚನೆ ಮಾಡಲಾಗಿದೆ. ಪ್ರತಿ ರೈಲ್ವೆ ವಲಯದಿಂದ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಳಿದ ಸಿಬ್ಬಂದಿಗೆ ಅವರು ಸೂಚನೆಗಳನ್ನು ನೀಡಲಿದ್ದಾರೆ.












Click it and Unblock the Notifications