ಮತ ಕಳ್ಳತನ ಆರೋಪ: ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿಯನ್ನ ಖಂಡಿಸಿ ಮತ್ತು ಮತ ಕಳ್ಳತನದ ಆರೋಪವನ್ನ ಮುಂದಿಟ್ಟುಕೊಂಡು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಖಂಡಿಸಿ ದೆಹಲಿಯಲ್ಲಿ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳ ಬೃಹತ್ ಪ್ರತಿಭಟನೆ
ದೆಹಲಿಯಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸುಮಾರು 300ಕ್ಕೂ ಹೆಚ್ಚು ಸಂಸದರು ಪಾಲ್ಗೊಂಡಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. "ನಾವು ಕೇವಲ ಸರ್ಕಾರದ ನೀತಿಗಳನ್ನ ವಿರೋಧಿಸುತ್ತಿಲ್ಲ, ಬದಲಾಗಿ ಭಾರತದ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನ ಸಂಪೂರ್ಣವಾಗಿ ನಾಶಮಾಡಲು ಹೊರಟಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಉಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ" ಎಂದು ರಾಹುಲ್ ಪ್ರತಿಭಟನಾಕಾರರನ್ನ ಉದ್ದೇಶಿಸಿ ಘೋಷಿಸಿದರು.
ಬಿಜೆಪಿ ನಾಯಕರು ಮತ್ತು ಸರ್ಕಾರದ ಟೀಕೆಗಳ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ರಾಹುಲ್ ಗಾಂಧಿ, ದೇಶದ ಯುವಜನತೆಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಸಂಪೂರ್ಣ ಅರಿವಿದೆ ಎಂದು ಹೇಳಿದರು.
ಮತ ಕಳ್ಳತನ ಆರೋಪ
ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ದೋಷಗಳನ್ನು ನುಸುಳಿಸುವ ಮೂಲಕ ಮತ ಕಳ್ಳತನ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ. ದೇಶದ ಚುನಾವಣಾ ವ್ಯವಸ್ಥೆಯನ್ನ ದುರ್ಬಲಗೊಳಿಸುವ ಷಡ್ಯಂತ್ರಗಳು ನಡೆಯುತ್ತಿದ್ದು, ಇದನ್ನು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಎದುರಿಸುತ್ತಿವೆ.
ಈ ಹೋರಾಟ ಕೇವಲ ರಾಜಕೀಯ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನ ರಕ್ಷಿಸುವ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ . ತಮ್ಮ ಭಾಷಣದ ವೇಳೆ, ಪ್ರತಿಭಟನಾಕಾರರನ್ನು ತಡೆಯುತ್ತಿದ್ದ ಕೆಲವು ಪೊಲೀಸ್ ಸಿಬ್ಬಂದಿ ಸಹ ಹಾಲಿ ವ್ಯವಸ್ಥೆಯ ಬಗ್ಗೆ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆಯನ್ನ ರಾಹುಲ್ ನೀಡಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೋದಿ, ಅಮಿತ್ ಶಾ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ
ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಹೆಸರುಗಳನ್ನ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಇವರೆಲ್ಲರೂ ಭಾರತದ ಪ್ರಜಾಪ್ರಭುತ್ವವನ್ನ ದುರ್ಬಲಗೊಳಿಸಲು ಕಾರಣರಾಗಿದ್ದಾರೆ ಎಂದು ದೂರಿದರು.
ವಿಶೇಷವಾಗಿ ಚುನಾವಣಾ ಆಯೋಗ ಮತ್ತು ಜ್ಞಾನೇಶ್ ಕುಮಾರ್ ಅವರು ಮತ ಕಳವು ಪ್ರಕ್ರಿಯೆಗೆ ಸಹಕರಿಸಿದ್ದಾರೆ ಎಂದು ರಾಜಕೀಯ ಆರೋಪ ಮಾಡಿದರು. "ದೇಶದ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದವರ ವಿರುದ್ಧ ಭವಿಷ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೋದಿ, ಶಾ, ಜ್ಞಾನೇಶ್ ಕುಮಾರ್ ಅಥವಾ ಭಾಗವತ್- ಇವರಲ್ಲಿ ಯಾರೊಬ್ಬರೂ ಈ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದರು.
VIDEO | Opposition's protest against CEC in Delhi: LoP Lok Sabha Rahul Gandhi, says, "We are not only countering them, we are going to destroy them. I have no interest in what BJP says. I am standing here to save the democracy of India. A few hours ago, 300 Lok Sabha and Rajya Sabha MPs came here with me. They too are trying to save democracy in the country. Amit Shah, Narendra Modi, Mohan Bhagwat and Gyanesh Kumar... these people have destroyed the country's democratic system. The entire country believes this. The youth of the country believe and understand this. Even the policemen who were stopping me here just now were saying the same thing... The country has been hijacked by Narendra Modi through vote theft. Amit Shah has hijacked it. Mohan Bhagwat has hijacked it, and Gyanesh Kumar has helped them. You will see... I am saying this after careful consideration. Action will be taken against all of them. You will see, not a single one of them will escape. Whether it is Narendra Modi, Amit Shah, Gyanesh Kumar or Mohan Bhagwat. What has been done to our country, is called treason. Nobody is going to escape."#RahulGandhi #CEC #OppositionProtest(Full video available on PTI Videos - https://t.co/bIyFWTfmBd)
— Press Trust of India (@PTI_News) October 6, 2026
ಚುನಾವಣಾ ಆಯೋಗದ ವಿವಾದ ಮತ್ತು ಮುಂದಿನ ಹಾದಿ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮತ್ತು ಮತದಾರರ ಹೆಸರುಗಳನ್ನ ಅಳಿಸಿಹಾಕಿರುವ ಬಗ್ಗೆ ವಿರೋಧ ಪಕ್ಷಗಳು ಮತ್ತು ಹಲವು ಸಂಘಟನೆಗಳು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿವೆ. ಈ ಕಾರಣಕ್ಕಾಗಿಯೇ ವಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ, ಅದರಲ್ಲೂ ವಿಶೇಷವಾಗಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಿವೆ.
ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ, ಈ ಎಲ್ಲ ರಾಜಕೀಯ ಆರೋಪಗಳನ್ನ ಸ್ಪಷ್ಟವಾಗಿ ತಳ್ಳಿಹಾಕಿರುವ ಚುನಾವಣಾ ಆಯೋಗ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನ ಮೂವರು ಸದಸ್ಯರ ಸಮಿತಿಯು ಸ್ಥಾಪಿತ ಪ್ರಕ್ರಿಯೆ ಮತ್ತು ನಿಯಮಗಳ ಮೂಲಕವೇ ಕೈಗೊಂಡಿದೆ ಎಂದು ಸ್ಪಷ್ಟನೆ ನೀಡಿದೆ.


Click it and Unblock the Notifications
