ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದು ಕರೆದ 'ರಾಗಾ' ಮೇಲೆ ಬಿಜೆಪಿ ಕೆಂಡ
ಬೆಂಗಳೂರು,ಜೂನ್ 02: ನೆರೆ ಕೇರಳ ರಾಜ್ಯದ ಹಳೆಯ ಮತ್ತು ಮಿತ್ರ ಪಕ್ಷವಾದ ಮುಸ್ಲಿಂ ಲೀಗ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಸಂಪೂರ್ಣ ಜಾತ್ಯತೀತ ಪಕ್ಷ' ಎಂದು ಉಲ್ಲೇಖಿಸಿದ್ದಾರೆ. ಅವರ ಈ ಹೇಳಿಕೆ ಬಳಿಕೆ ಬಿಜೆಪಿ ಮತ್ತು ಕಾಂಗ್ರೆಸ್ ಮಾತಿನ ಜಟಾಪಟಿ ಆರಂಭವಾಗಿದೆ.
ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಸಂವಾದದ ಸಂದರ್ಭದಲ್ಲಿ ಗಾಂಧಿ ವಂಶಸ್ಥರ ಕುರಿತ ಹೇಳಿಕೆಗಳು, ಜಾತ್ಯತೀತತೆ ಪ್ರತಿಪಾದನೆ, ಬಿಜೆಪಿಯ ಹಿಂದುತ್ವ ರಾಜಕಾರಣ ಬಗ್ಗೆ ಅವರು ಮಾತನಾಡಿದರು. ಈ ವೇಳೆ ಕೇರಳದ ಮುಸ್ಲಿಂ ಲೀಗ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ವರದಿಗಾರ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ. ಮುಸ್ಲಿಂ ಲೀಗ್‌ನಲ್ಲಿ ಜಾತ್ಯತೀತವಲ್ಲದ್ದು ಯಾವುದೂ ಇಲ್ಲ ಎಂದು ಹೇಳಿದ್ದರು.

ಅವರ ಈ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಯ ವಿಡಿಯೋ ಇಟ್ಟುಕೊಂಡು ಬಿಜೆಪಿಯು ರಾಹುಲ್ ಗಾಂಧೀಯವರ ಮೇಲೆ ಮುಗಿಬಿದ್ದಿದೆ. ರಾಗಾ ಹಿಂದಿನ ಲೋಕಸಭಾ ಕ್ಷೇತ್ರವಾದ ವಯನಾಡಿನ ಜನರ ಮನವೊಲಿಕೆಗೆ ಕೇರಳದ ಮುಸ್ಲಿಂ ಲೀಗ್ ಅನ್ನು 'ಜಾತ್ಯತೀತ ಪಕ್ಷ' ಎಂದು ಕರೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಗಾ ಹೇಳಿಕೆಗೆ ಅಮಿತ್ ಮಾಳವಿಯಾ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರ ಪ್ರಕಾರ ನೋಡುವುದಾದರೆ, ಧಾರ್ಮಿಕ ನೆಲೆಗಟ್ಟಿನಲ್ಲಿ ದೇಶ ವಿಭಜನೆಗೆ ಕಾರಣವಾದ ಜಿನ್ನಾ ಅವರ ಮುಸ್ಲಿಂ ಲೀಗ್ ಪಕ್ಷವನ್ನು 'ಜಾತ್ಯತೀತ ಪಕ್ಷ' ಎನ್ನುವ ಮೂಲಕ ರಾಹುಲ್ ಗಾಂಧಿಯವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಂಬಂಧ ಮತ್ತೆ ವಯನಾಡಿನಲ್ಲಿ ನೆಲೆ ಕಂಡುಕೊಳ್ಳಲು ಹೀಗೆ ಹೇಳಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿದ್ದಾರೆ.

ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಮತ್ತು ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷಗಳು ಇವೆರಡು ಸಂಬಂಧವಿಲ್ಲ ಮತ್ತ ಭಿನ್ನ ಪಕ್ಷಗಳೇ ಆಗಿವೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಸಾಂಪ್ರದಾಯಿಕ ಮಿತ್ರ ಪಕ್ಷವಾಗಿದೆ ಎಂದರು.
ಬಿಜೆಪಿಯವರ ಅನಕ್ಷರಸ್ಥರೇ: ಖೇರಾ ವಾಗ್ದಾಳಿ
ಬಿಜೆಪಿ ಆರೋಪಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ಬಿಜೆಪಿಯವರೇನು ನೀವು ಅನಕ್ಷರಸ್ಥರೇ ಎಂದು ಪ್ರತಿಕ್ರಿಯಿಸಿದ್ದಾರೆ. ಕೇರಳದ ಮುಸ್ಲಿಂ ಲೀಗ್ ಮತ್ತು ಜಿನ್ನಾರ ಮುಸ್ಲಿಂ ಲೀಗ್ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ? ಜಿನ್ನಾರ ಮುಸ್ಲಿಂ ಲೀಗ್ ನಿಮ್ಮ ಪೂರ್ವಜರು ಮೈತ್ರಿ ಮಾಡಿಕೊಂಡದ್ದು. ಎರಡನೇ ಮುಸ್ಲಿಂ ಲೀಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಖೇರಾ ವಾಗ್ದಾಳಿ ನಡೆಸಿದರು.
ಬಿಜೆಪಿಯ ಸೈದ್ಧಾಂತಿಕ ಪೋಷಕ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಉಲ್ಲೇಖಿಸಿ ಮಾತನಡಿದ ಖೇರಾ ಅವರು, ಕೆಲವು ಐತಿಹಾಸಿಕ ಮೂಲಗಳ ಪ್ರಕಾರ RSS ನಾಗರಿಕ ಅಸಹಕಾರ ಚಳುವಳಿಗಳಿಂದ ಹೊರಗುಳಿಯಲು ಮುಸ್ಲಿಂ ಲೀಗ್‌ನ ಪರವಾಗಿ ನಿಂತಿತ್ತು. ದ್ವಿ-ರಾಷ್ಟ್ರ ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಮಿತೃತ್ವ ಹೊಂದಿತ್ತು ಎಂದು ಅವರು ತಿರುಗೇಟು ನೀಡಿದರು.
ಜಾತ್ಯಾತೀತ ಪಕ್ಷ ಎನ್ನುವ ಮೂಲಕ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಯುದ್ಧದ ಆರಂಭಕ್ಕೆ ಕಾರಣವಾಗಿದೆ.












Click it and Unblock the Notifications