ರೈತರ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿ ನಾಟಿ ಮಾಡಿದ ರಾಹುಲ್ ಗಾಂಧಿ
ಚಂಡೀಗಢ, ಜುಲೈ 8: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ರೈತ ಜನರೊಂದಿಗೆ ಸಂವಾದ ನಡೆಸಿದರು. ಬಳಿಕ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಟ್ರ್ಯಾಕ್ಟರ್ ಓಡಿಸಿ ನಾಟಿ ಮಾಡಿದರು.
ಶನಿವಾರ ಮುಂಜಾನೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಆಗ ಅನಿರೀಕ್ಷಿತವಾಗಿ ಗದ್ದೆಗೆ ಭೇಟಿ ನೀಡಿದರು. ರಾಹುಲ್ ಅವರು ಗ್ರಾಮಸ್ಥರು ಮತ್ತು ಹೊಲಗಳಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಂವಾದ ನಡೆಸಿದರು. ಆಗ ರಾಹುಲ್ ಸಹ ಭತ್ತ ನಾಟಿ ಮಾಡಿ ಟ್ರ್ಯಾಕ್ಟರ್ ಓಡಿಸಿದರು ಎಂದು ಸೋನಿಪತ್‌ನ ಗೊಹಾನದ ಕಾಂಗ್ರೆಸ್ ಶಾಸಕ ಜಗ್ಬೀರ್ ಸಿಂಗ್ ಮಲಿಕ್ ಪಿಟಿಐಗೆ ತಿಳಿಸಿದರು.

ರಾಹುಲ್ ಗಾಂಧಿ ಬಹುಶಃ ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದರು. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ ಚಿತ್ರಗಳಲ್ಲಿ, ಗಾಂಧಿಯವರು ತಮ್ಮ ಪರಿಚಿತ ಬಿಳಿ ಟೀ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೂ ಗ್ರಾಮಸ್ಥರೊಂದಿಗೆ ಗದ್ದೆಗೆ ಹೆಜ್ಜೆ ಹಾಕುತ್ತಿದ್ದರು ಕಂಡು ಬಂದಿದೆ.
ಶುಕ್ರವಾರ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ಮೋದಿ ಉಪನಾಮ ಹೇಳಿಕೆಯ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ. ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಗಾಂಧಿಯವರು ಮೇ 23 ರಂದು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.
ಇತ್ತೀಚೆಗೆ ರಾಹುಲ್ ಗಾಂಧಿ ರಾತ್ರಿಯ ಸಮಯದಲ್ಲಿ ಬಿಳಿ ಟೀ ಶರ್ಟ್ ಧರಿಸಿ, ಟ್ರಕ್‌ನೊಳಗೆ ಕುಳಿತು ಪ್ರಯಾಣವನ್ನು ಕೈಗೊಂಡಿದ್ದರು. ಈ ದೃಶ್ಯಗಳು ಮತ್ತು ವೀಡಿಯೊಗಳಲ್ಲಿ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ತಮ್ಮ ಬಿಳಿ ಟಿಶರ್ಟ್ ತೊಟ್ಟು ಡ್ರೈವರ್‌ನೊಂದಿಗೆ ಪ್ರಯಾಣಿಸಿದರು. ಬಳಿಕ ಸ್ಥಳೀಯ ಡಾಬಾದಲ್ಲಿ ಚಾಲಕರೊಂದಿಗೆ ಸಂವಾದ ನಡೆಸಿದ್ದರು.

ಇದಲ್ಲದೆ ದೆಹಲಿ ಮ್ಯಾಕನಿಕ್ ಶಾಪ್ ಒಂದಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ಮೆಕಾನಿಕ್‌ಗಳೊಂದಿಗೆ ಕೆಲಸವನ್ನೂ ಮಾಡಿದ್ದರು. ಬಳಿಕ ಅವರೊಂದಿಗೆ ಸಂವಾದ ನಡೆಸಿ ಅವರ ಕಷ್ಟಗಳನ್ನು ಆಲಿಸಿದ್ದರು.












Click it and Unblock the Notifications