Rahul Gandhi Disqualified: ಯಾರ ವಿರುದ್ಧ ರಾಹುಲ್ ಪ್ರತಿಭಟನೆ?
ನವದೆಹಲಿ, ಮಾರ್ಚ್ 24: ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಯಾರ ವಿರುದ್ಧ ರಾಹುಲ್ ಗಾಂಧಿ ದೇಶವ್ಯಾಪಿ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡುತ್ತಿದ್ದ ಜೋಶಿ, "ಕಾಂಗ್ರೆಸ್ ನ್ಯಾಯಾಂಗದ ವಿರುದ್ಧವೇ ದೇಶವ್ಯಾಪಿ ಪ್ರತಿಭಟನೆ ಮಾಡಲು ಹೊರಟಿದೆಯಾ. ಕಾಂಗ್ರೆಸ್ ದೇಶದ ಸಂವಿಧಾನಬದ್ಧ ಸಂಸ್ಥೆಗಳಿಗೆ ಅವಮಾನ ಮಾಡಿರುವುದಲ್ಲದೇ ಇದೀಗ ದೇಶದ ನ್ಯಾಯಾಂಗವನ್ನು ಪ್ರಶ್ನೆ ಮಾಡುತ್ತಿದೆ" ಎಂದು ಅವರು ಕಿಡಿಕಾರಿದರು.

"ಮೋದಿ ಎಂಬ ಉಪನಾಮದ ಕುರಿತು ರಾಹುಲ್ ಗಾಂಧಿ ಕೇವಲವಾಗಿ ಮಾತಾಡಿದ್ದರು. ಇಡೀ ಒಬಿಸಿ ಜನಾಂಗಕ್ಕೆ ಅವಮಾನ ಆಗುವ ರೀತಿಯಲ್ಲಿ ರಾಹುಲ್ ಗಾಂಧಿ ಮಾತಾಡಿದ್ದರು. ಸೂರತ್ ನ ನ್ಯಾಯಾಲಯ ರಾಹುಲ್ ಗಾಂಧಿಗೆ ಕ್ಷಮೆ ಯಾಚಿಸುತ್ತೀರಾ ಎಂದು ಕೇಳಿದರೂ, ರಾಹುಲ್ ಗಾಂಧಿ ಕ್ಷಮೆ ಯಾಚಿಸಲು ಸಂಪೂರ್ಣವಾಗಿ ನಿರಾಕರಿಸಿದ್ದರು" ಎಂದು ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
"ಮಾನಹಾನಿ ಪ್ರಕರಣದಲ್ಲಿ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಆದರೆ ನ್ಯಾಯಾಂಗದ ಮೇಲೂ ಕಾಂಗ್ರೆಸ್ ಬೊಟ್ಟು ಮಾಡಿ ತೋರಿಸುತ್ತಿದೆ. ದೇಶವ್ಯಾಪಿ ಪ್ರತಿಭಟನೆ ಎನ್ನುವ ಕಾಂಗ್ರೆಸ್ ಯಾರ ವಿರುದ್ಧ ಅಂತಾ ಜನತೆಯ ಎದುರು ಹೇಳಬೇಕು. ಬಿಜೆಪಿ ಪಕ್ಷ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿಲ್ಲ. ನ್ಯಾಯಾಲಯ ತೀರ್ಪು ನೀಡಿದೆ"ಎಂದು ಪ್ರಲ್ಹಾದ್ ಜೋಶಿ ಹೇಳಿದರು.
"ನ್ಯಾಯಾಂಗ ವ್ಯವಸ್ಥೆಯನ್ನ ಗೌರವಿಸುವ ಬದ್ಧತೆಯನ್ನ ಜನಪ್ರತಿನಿಧಿಗಳು ಹೊಂದಿರಬೇಕು. ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಲಿ. ಅದಕ್ಕೆ ಯಾರು ಅಡ್ಡಿಯಾಗಿಲ್ಲ. ಆದರೆ ತಮ್ಮ ತಪ್ಪು ಇಟ್ಟುಕೊಂಡು ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆಯನ್ನೇ ಕಾಂಗ್ರೆಸ್ ದೂರುತ್ತಿರುವುದು ಸರಿಯಲ್ಲ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ಪಟ್ಟರು.
ಪ್ರಜಾಸತಾತ್ಮಕವಾಗಿ ರಚನೆಯಾಗಿರುವ ಸಂಸ್ಥೆಗಳಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಯುವ ಸದನದಲ್ಲಿ ಕಲಾಪಗಳಿಗೆ ಅಡ್ಡಿಪಡಿಸುತ್ತಿದೆ. ಅಧಿವೇಶನದ ಚರ್ಚೆಗಳಿಂದ ಪಲಾಯನ ಮಾಡುತ್ತಿದೆ. ಹೊರ ದೇಶಗಳಿಗೆ ಹೋಗಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ಕೇವಲವಾಗಿ ಮಾತಾಡಿದ್ದರು. ಈಗ ಕೋರ್ಟ್ ತೀರ್ಪನ್ನು ಪ್ರಶ್ನಿಸುವ ಮಟ್ಟಕ್ಕೆ ಬೇಜವಾಬ್ದಾರಿತನದಿಂದ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದರಿಂದ ಅವರು ಪ್ರತಿನಿಧಿಸುವ ಕೇರಳದ ವಾಯನಾಡ್ ಕ್ಷೇತ್ರದಲ್ಲಿ ವಿಶೇಷ ಉಪಚುನಾವಣೆಯನ್ನು ಚುನಾವಣಾ ಆಯೋಗ ನಡೆಸಬಹುದಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ರಾಹುಲ್ ಗಾಂಧಿ ಅವರಿಗೆ ಅವಕಾಶವಿದೆ. ಅಲ್ಲಿ ಅವರ ಅರ್ಜಿ ಸ್ವೀಕೃತಗೊಳ್ಳದಿದ್ದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ.












Click it and Unblock the Notifications