ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ದೋಷಿ: ಮಹಾತ್ಮ ಗಾಂಧಿಯವರ ಹೇಳಿಕೆ ಉಲ್ಲೇಖಿಸಿ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್. 23: 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿದೆ. ತೀರ್ಪಿನ ನಂತರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, ಸತ್ಯವೇ ನನ್ನ ದೇವರು ಎಂದಿದ್ದಾರೆ.
मेरा धर्म सत्य और अहिंसा पर आधारित है। सत्य मेरा भगवान है, अहिंसा उसे पाने का साधन।
— Rahul Gandhi (@RahulGandhi) March 23, 2023
- महात्मा गांधी
2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರು "ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಹೇಗೆ ಇರುತ್ತದೆ ಎಂಬುದು ಆಶ್ಚರ್ಯ" ಎಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಅವರು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ರಾಹುಲ್ ಗಾಂಧಿ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು 2 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ಬಳಿಕ ಜಾಮೀನು ನೀಡಿ, ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಯಿತು. ನ್ಯಾಯಾಲಯದ ಆದೇಶದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ. ಸತ್ಯವೇ ನನ್ನ ದೇವರು, ಅಹಿಂಸೆ ಅದನ್ನು ಪಡೆಯುವ ಸಾಧನವಾಗಿದೆ. - ಮಹಾತ್ಮಾ ಗಾಂಧಿ" ಎಂದು ಬರೆದಿದ್ದಾರೆ.
ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಸಿಆರ್‌ಪಿಸಿಯ ಸೆಕ್ಷನ್ 202 ರ ಅಡಿಯಲ್ಲಿ ಕಾನೂನು ಕಾರ್ಯವಿಧಾನವನ್ನು ಅನುಸರಿಸದ ಕಾರಣ ಪ್ರಕ್ರಿಯೆಯು ಮೊದಲಿನಿಂದಲೂ ದೋಷಪೂರಿತವಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲರು ವಾದಿಸಿದ್ದರು. ರಾಹುಲ್ ಗಾಂಧಿಯವರ ಭಾಷಣಕ್ಕೆ ಪೂರ್ಣೇಶ್ ಮೋದಿ ಗುರಿಯಾಗದ ಕಾರಣ ನರೇಂದ್ರ ಮೋದಿ ಅವರೇ ಪ್ರಕರಣದಲ್ಲಿ ದೂರುದಾರರಾಗಬೇಕಿತ್ತು ಎಂದು ರಾಹುಲ್ ಗಾಂಧಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇನ್ನು, ಸೂರತ್ ನ್ಯಾಯಾಲಯದ ತೀರ್ಪಿಗೆ ರಾಹುಲ್ ಗಾಂಧಿಯವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ."ಇಡೀ ಭಯಭೀತ ಆಡಳಿತವು ಶಿಕ್ಷೆ, ತಾರತಮ್ಯವನ್ನು ವಿಧಿಸುವ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನನ್ನ ಸಹೋದರ ಎಂದಿಗೂ ಹೆದರಿದಿಲ್ಲ, ಮುಂದೆಯೂ ಎಂದಿಗೂ ಹೆದರುವುದಿಲ್ಲ. ಆತ ಸತ್ಯವನ್ನು ಮಾತನಾಡುತ್ತಾ ಬದುಕಿದ್ದಾನೆ ಮತ್ತು ಸತ್ಯವನ್ನೇ ಮಾತನಾಡುತ್ತಾನೆ. ಅವರು ದೇಶದ ಜನರ ಧ್ವನಿಯಾಗುವುದನ್ನು ಮುಂದುವರಿಸುತ್ತಾರೆ. ಸತ್ಯದ ಶಕ್ತಿ ಮತ್ತು ಕೋಟ್ಯಂತರ ಜನರ ಪ್ರೀತಿ ಅವರೊಂದಿಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿರೋಧ ಪಕ್ಷದ ನಾಯಕರನ್ನು ಮುಗಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ವಿರೋಧ ಪಕ್ಷದ ನಾಯಕರು ಮತ್ತು ಪಕ್ಷಗಳನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿಯೇತರ ಪಕ್ಷಗಳ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಷಡ್ಯಂತ್ರ ನಡೆಯುತ್ತಿದೆ. ನನಗೆ ರಾಹುಲ್ ಗಾಂಧಿಯೊಂದಿಗೆ ಭಿನ್ನಾಭಿಪ್ರಾಯವಿದೆ. ಆದರೆ ಅವರನ್ನು ಮಾನನಷ್ಟ ಮೊಕದ್ದಮೆಯಲ್ಲಿ ಸಿಲುಕಿಸುವುದು ಸರಿಯಲ್ಲ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ, ಆದರೆ ತೀರ್ಪನ್ನು ಒಪ್ಪುವುದಿಲ್ಲ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications