ಎರಡೂ ಬದಿಯಲ್ಲಿ 'ಹೆಡ್' ಇರುವ ಕಾಯಿನ್ ಟಾಸ್ ಹಾರಿಸುತ್ತಿದ್ದೆ!: ಚಿದಂಬರಂ
ನವದೆಹಲಿ, ಸೆಪ್ಟೆಂಬರ್ 24: ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರಾಕರಿಸಿರುವುದಲ್ಲದೆ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಇರುವ ಸಂಬಂಧದ ಬಗ್ಗೆ ಪ್ರಶ್ನಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಾಜಿ ಸಚಿವ ಪಿ. ಚಿದಂಬರಂ ಹರಿಹಾಯ್ದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
'ಸತ್ಯಕ್ಕೆ ಎರಡು ಆಯಾಮಗಳಿರಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಖಂಡಿತಾ ಅದು ಸತ್ಯ. ಹಣಕಾಸು ಸಚಿವರ ಪ್ರಕಾರ, ಇಲ್ಲಿ ಎರಡು ಆಯಾಮಗಳಿವೆ. ಇವುಗಳಲ್ಲಿ ಸತ್ಯದ ಆಯಾಮವನ್ನು ಕಂಡು ಹಿಡಿಯುವ ಅತ್ಯುತ್ತಮ ಮಾರ್ಗ ಯಾವುದು' ಎಂದು ಮೊದಲ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

'ಒಂದೋ ತನಿಖೆಗೆ ಆದೇಶ, ಇಲ್ಲವೇ ಕಾಯಿನ್ ಟಾಸ್ ಮಾಡುವುದು. ನಾನು ಹಣಕಾಸು ಸಚಿವನಾಗಿದ್ದರೆ ಕಾಯಿನ್ ಟಾಸ್ ಮಾಡುವುದನ್ನು ಆಯ್ದುಕೊಳ್ಳುತ್ತಿದ್ದೆ (ಆ ಕಾಯಿನ್ ಎರಡೂ ಬದಿಗಳಲ್ಲಿ 'ಹೆಡ್' ಇರುತ್ತಿತ್ತು) ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
'ಈಗ ನಡೆಯುತ್ತಿರಯವ ಘಟನಾವಳಿಗಳ ಸಮಸ್ಯೆಗಳನ್ನು ಸರ್ಕಾರ ಗಮನಿಸದೆ ಇರುವುದಕ್ಕೆ ಮತ್ತು ತನಿಖೆಗೆ ಆದೇಶ ನೀಡದೆ ಇರುವುದಕ್ಕೆ ಬೇಸರವಾಗುತ್ತಿದೆ. ಮುಂದಿನ ಆರು ಅಥವಾ 12 ತಿಂಗಳಿನಲ್ಲಿ ಏನಾಗಲಿದೆಯೋ ಯಾರಿಗೆ ತಿಳಿದಿದೆ' ಎಂದು ಮೂರನೇ ಟ್ವೀಟ್‌ನಲ್ಲಿ ಹೇಳಿದ್ದಾರೆ.
Either (1) order an inquiry or (2) toss a coin. I suppose the FM would prefer to toss a coin (preferably with 'head' on both sides)!
— P. Chidambaram (@PChidambaram_IN) September 24, 2018
ಫ್ರೆಂಚ್ ವೆಬ್‌ಸೈಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್, ದಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ಪಾಲುದಾರನಾಗಿ ರಿಲಯನ್ಸ್ ಡಿಫೆನ್ಸ್ ಸಮೂಹವನ್ನು ಆಯ್ದುಕೊಳ್ಳುವಂತೆ ಭಾರತ ಸರ್ಕಾರ ಸಲಹೆ ನೀಡಿತ್ತು ಎಂದು ಹೇಳಿದ್ದರು. ಆದರೆ, ಅದರ ಬಗ್ಗೆ ಮತ್ತೆ ಹೇಳಿಕೆ ನೀಡಿದ್ದ ಅವರು, ರಿಲಯನ್ಸ್ ಡಿಫೆನ್ಸ್ ಪರವಾಗಿ ಸರ್ಕಾರ ಲಾಬಿ ಮಾಡಿತ್ತೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಅದು ದಾಸಾಲ್ಟ್ ಕಂಪೆನಿಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.
ಒಲಾಂಡ್ ಹೇಳಿಕೆ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಇದರ ಬಗ್ಗೆ ಮಾತನಾಡಿದ್ದ ಅರುಣ್ ಜೇಟ್ಲಿ, ಸತ್ಯಕ್ಕೆ ಎರಡು ಆಯಾಮಗಳಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು.












Click it and Unblock the Notifications