ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುದು ತಪ್ಪು: ವಿಶ್ವವಿದ್ಯಾಲಯಗಳಿಗೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಿವಿಮಾತು

ವಿಶ್ವವಿದ್ಯಾಲಯಗಳು ಮುಕ್ತ ಚಿಂತನೆಯ ತಾಣಗಳಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಆಡಳಿತ ಮಂಡಳಿಯನ್ನ ಪ್ರಶ್ನಿಸುವ ಅಥವಾ ಭಿನ್ನವಾದ ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು, ವಿದ್ಯಾರ್ಥಿಗಳ ಭಿನ್ನಾಭಿಪ್ರಾಯವನ್ನ ಹತ್ತಿಕ್ಕುವುದು ಮತ್ತು ಅವರಿಗೆ ಶಿಕ್ಷೆ ನೀಡುವುದು ಅಸಾಂವಿಧಾನಿಕ ನಡೆಯಾಗಿದೆ ಎಂದಿದ್ದಾರೆ.

ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಸ್ನಾತಕೋತ್ತರ ವಿದ್ಯಾರ್ಥಿಗಳ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಭಿನ್ನಾಭಿಪ್ರಾಯಗಳನ್ನ ರಕ್ಷಿಸುವುದು ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಅವಶ್ಯಕ ಎಂದರು.

Punishing Students For Dissent Is Unconstitutional SC Judge Ujjal Bhuyan At NLU Delhi Convocation

"ವಿದ್ಯಾರ್ಥಿಗಳು ತಮ್ಮದೇ ಆದ ಬೇರೆಯೊಂದು ದೃಷ್ಟಿಕೋನದ ಬಗ್ಗೆ ವ್ಯಕ್ತಪಡಿಸಿದಾಗ ಅಥವಾ ಕಠಿಣವಾದ ಪ್ರಶ್ನೆಗಳನ್ನ ಕೇಳಿದಾಗ, ಅವರ ಮೇಲೆ ಕಠಿಣ ಕ್ರಮದ ಬೆದರಿಕೆ ಹಾಕಿ ಬಾಯಿ ಮುಚ್ಚಿಸಬಾರದು. ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅಧಿಕಾರದ ಸ್ಪಷ್ಟ ದುರ್ಬಳಕೆಯಾಗಿದೆ" ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಸ್ಪಷ್ಟಪಡಿಸಿದರು.

ಅವರ ಪ್ರಕಾರ, ವಿಶ್ವವಿದ್ಯಾಲಯ ಎಂಬುದು ಕೇವಲ ಪಠ್ಯಪುಸ್ತಕಗಳನ್ನ ಓದುವ ಜಾಗವಲ್ಲ. ಬದಲಾಗಿ, ವ್ಯಕ್ತಿಗಳು ತಮ್ಮದಲ್ಲದ, ವಿಭಿನ್ನವಾದ ವಿಚಾರಗಳನ್ನು ಎದುರಿಸುವ ಮತ್ತು ಚರ್ಚಿಸುವ ವೇದಿಕೆಯಾಗಬೇಕು. ಸ್ಥಾಪಿತ ನಿಯಮಗಳನ್ನು ಪರೀಕ್ಷಿಸುವ, ಪ್ರಶ್ನಿಸುವ ಮತ್ತು ದ್ವೇಷದ ಬದಲಾಗಿ ತಾರ್ಕಿಕವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಸಂಸ್ಕೃತಿ ಅಲ್ಲಿ ಬೆಳೆಯಬೇಕು.

"ಪ್ರಶ್ನೆ ಕೇಳುವ ಹಕ್ಕನ್ನು ಧಿಕ್ಕಾರ ಎಂದು ಪರಿಗಣಿಸಬಾರದು. ಮುಕ್ತ ಸಮಾಜದಲ್ಲಿ ಅಸಮ್ಮತಿಗೆ ಯಾವಾಗಲೂ ಅವಕಾಶವಿರಬೇಕು. ಸ್ವಾತಂತ್ರ್ಯ ಮತ್ತು ವೈವಿಧ್ಯತೆಯನ್ನು ಗೌರವಿಸುವ ಪ್ರಜಾಸತ್ತಾತ್ಮಕ ಸಮಾಜ ನಮಗೆ ಬೇಕಾದರೆ, ಆ ಸಂಸ್ಕೃತಿಯ ಬೇರುಗಳು ವಿಶ್ವವಿದ್ಯಾಲಯಗಳಿಂದಲೇ ಪ್ರಾರಂಭವಾಗಬೇಕು" ಎಂದು ಅವರು ಒತ್ತಿ ಹೇಳಿದರು.

ಸಹಿಷ್ಣುತೆ ಎಂಬುದು ನಮ್ಮ ಸಂವಿಧಾನದ ಮೂಲಭೂತ ಮೌಲ್ಯ. ಅಸಹಿಷ್ಣು ಮನಸ್ಥಿತಿಯು ಭಾರತೀಯ ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳು ವಿವರಿಸಿದರು. ಬುದ್ಧ ಮತ್ತು ಗಾಂಧೀಜಿಯವರಂತಹ ಅಹಿಂಸಾ ಪ್ರತಿಪಾದಕರು ಹುಟ್ಟಿದ ಈ ನಾಡಿನಲ್ಲಿ, ಅಸಹಿಷ್ಣುತೆಗೆ ಯಾವುದೇ ಸ್ಥಾನವಿಲ್ಲ. ಅಸಹಿಷ್ಣುತೆಯನ್ನು ಒಂದು ರೀತಿಯ ಹಿಂಸೆ ಎಂದೇ ಬಣ್ಣಿಸಿದ ಅವರು, ಸಂವಿಧಾನವು ಮುಕ್ತವಾಗಿ ಮಾತನಾಡಲು, ಯೋಚಿಸಲು ಮತ್ತು ವಿಭಿನ್ನವಾಗಿ ನಂಬಲು ನಮಗೆ ಸ್ವಾತಂತ್ರ್ಯ ನೀಡಿದೆ ಎಂಬುದನ್ನು ನೆನಪಿಸಿದರು.

ಭಿನ್ನಾಭಿಪ್ರಾಯವನ್ನು ಕೇವಲ ಅಭಿಪ್ರಾಯ ಭೇದ ಎಂದು ಪರಿಗಣಿಸದೆ, ಅದನ್ನು ಬಲವಂತವಾಗಿ ತಿರಸ್ಕರಿಸುವ, ಶಿಕ್ಷಿಸುವ ಅಥವಾ ಹತ್ತಿಕ್ಕುವ ಪ್ರಯತ್ನಗಳು ನಡೆದಾಗ ಸಂವಿಧಾನದ ಚೌಕಟ್ಟು ದುರ್ಬಲಗೊಳ್ಳುತ್ತದೆ. ಭಿನ್ನಾಭಿಪ್ರಾಯದೊಂದಿಗೆ ಬದುಕುವುದು ಕೇವಲ ಸಾಮಾಜಿಕ ಸದ್ಗುಣವಲ್ಲ, ಅದು ಉದಾರ ಸಾಂವಿಧಾನಿಕ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾನೂನು ವೃತ್ತಿಪರರ ಜವಾಬ್ದಾರಿ

ಇದೇ ವೇಳೆ ಕಾನೂನು ಪದವೀಧರರು ಮತ್ತು ವೃತ್ತಿಪರರ ಜವಾಬ್ದಾರಿಯನ್ನು ನೆನಪಿಸಿದ ಅವರು, ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಾಗಲೂ ಸ್ವಾತಂತ್ರ್ಯ, ಸಮಾನತೆ, ಘನತೆ ಮತ್ತು ನ್ಯಾಯದಂತಹ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಕಾನೂನು ವೃತ್ತಿಪರರಿಂದ ಆಗಬೇಕು ಎಂದರು.

"ಪ್ರತಿಯೊಬ್ಬರೂ ಒಂದೇ ಭಾಷೆಯಲ್ಲಿ, ಒಂದೇ ರೀತಿಯಲ್ಲಿ ಯೋಚಿಸಿದಾಗ ಪ್ರಜಾಪ್ರಭುತ್ವ ಅರ್ಥಪೂರ್ಣವಾಗುವುದಿಲ್ಲ. ಬದಲಾಗಿ, ವಿಭಿನ್ನ ಧ್ವನಿಗಳು ಒಟ್ಟಿಗೆ ಸಹಬಾಳ್ವೆ ನಡೆಸಿದಾಗ, ಆ ಧ್ವನಿಗಳಿಗೆ ಕಿವಿಗೊಟ್ಟಾಗ ಮತ್ತು ಅವುಗಳನ್ನು ಘನತೆಯಿಂದ ನಡೆಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಅರಳುತ್ತದೆ" ಎಂದು ನ್ಯಾಯಮೂರ್ತಿ ಭುಯಾನ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+