ಬಾಸ್ ವಿರುದ್ಧ ಉದ್ಯೋಗಿಗಳ ಸೀಕ್ರೆಟ್ ವಾಟ್ಸಾಪ್ ಗ್ರೂಪ್? ಅಸಲಿ ಸತ್ಯ ತಿಳಿದು ದಂಗಾದ ಸಂಸ್ಥಾಪಕ
ಇಂದಿನ ಕಾರ್ಪೊರೇಟ್ ಆಫೀಸ್‌ನಲ್ಲಿ ಉದ್ಯೋಗಿಗಳು ಮತ್ತು ಬಾಸ್ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಕಚೇರಿಯ ಕೆಲಸದ ಒತ್ತಡದ ನಡುವೆ ಉದ್ಯೋಗಿಗಳು ತಮಗಾಗಿ ಪ್ರತ್ಯೇಕ 'ವಾಟ್ಸಾಪ್ ಗ್ರೂಪ್' ಮಾಡಿಕೊಳ್ಳುವುದು ಸಾಮಾನ್ಯ.
ಆದರೆ, ಪುಣೆಯ ಸ್ಟಾರ್ಟ್‌ಅಪ್ ಕಂಪನಿಯೊಂದರ ಸಂಸ್ಥಾಪಕರಿಗೆ ತಮ್ಮ ಉದ್ಯೋಗಿಗಳು ತಮಗೇ ಗೊತ್ತಿಲ್ಲದಂತೆ ಒಂದು ಸೀಕ್ರೆಟ್ ಗ್ರೂಪ್ ಮಾಡಿದ್ದಾರೆ ಎಂಬ ವಿಚಾರ ತಿಳಿದಾಗ ಆರಂಭದಲ್ಲಿ ಆತಂಕಕ್ಕೊಳಗಾಗಿದ್ದರು. ಆದರೆ, ಆ ಗ್ರೂಪ್‌ನ ಹಿಂದಿದ್ದ ಅಸಲಿ ಕಾರಣ ತಿಳಿದಾಗ ಅವರು ಅಕ್ಷರಶಃ ಬೆರಗಾಗಿದ್ದಾರೆ.

ಪುಣೆಯ ಮೆಟ್ರೋ ಮೀಡಿಯಾ ಹೌಸ್ ಸಂಸ್ಥಾಪಕ ಸಕ್ಷಮ್ ಗೌರ್ ಅವರು ಇತ್ತೀಚೆಗೆ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ಘಟನೆಯನ್ನ ಹಂಚಿಕೊಂಡಿದ್ದಾರೆ. ತಮ್ಮ ಬೆನ್ನಹಿಂದೆ ಉದ್ಯೋಗಿಗಳ ಏನು ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.
ಪುಣೆ ಸ್ಟಾರ್ಟ್ಅಪ್ ಸಂಸ್ಥಾಪಕನಿಗೆ ಕಾದಿತ್ತು ಅಚ್ಚರಿ
ಸಕ್ಷಮ್ ಗೌರ್ ಅವರು ತಮ್ಮ ಕಂಪನಿಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದುಕೊಂಡಿದ್ದಾಗ, ಅವರ ಗಮನಕ್ಕೆ ಒಂದು ಅಚ್ಚರಿಯ ವಿಚಾರ ಬಂದಿತು. ತಮ್ಮ ಕಚೇರಿಯ ಇಡೀ ತಂಡ ಒಂದು ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಹೊಂದಿದ್ದು, ಅದರಲ್ಲಿ ತನ್ನನ್ನ ಮಾತ್ರ ಸೇರಿಸಿಲ್ಲ ಎಂಬ ಸತ್ಯ ಅವರಿಗೆ ತಿಳಿಯಿತು.
ಈ ವಿಚಾರ ತಿಳಿದ ತಕ್ಷಣ ಅವರ ಮನಸ್ಸಿನಲ್ಲಿ ಹಲವು ಅನುಮಾನಗಳು ಮೂಡಿದವು. "ಬಹುಶಃ ನನ್ನ ವಿರುದ್ಧ ಉದ್ಯೋಗಿಗಳು ತಿರುಗಿ ಬಿದ್ದಿದ್ದಾರಾ? ಬಾಸ್ ವಿರುದ್ಧ ಕಂಪ್ಲೇಂಟ್ ಮಾಡಲು ಈ ಗ್ರೂಪ್ ಮಾಡಿದ್ದಾರಾ?" ಎಂಬ ಆತಂಕ ಅವರನ್ನು ಕಾಡಿತ್ತು. ಉದ್ಯೋಗಿಗಳು ತಮ್ಮ ಬಗ್ಗೆ ಅಪಹಾಸ್ಯ ಮಾಡುತ್ತಿರಬಹುದು ಎಂದು ಅವರು ಊಹಿಸಿದ್ದರು.
ಸೀಕ್ರೆಟ್ ವಾಟ್ಸಾಪ್ ಗ್ರೂಪ್ ಹಿಂದಿನ ಅಸಲಿ ಸತ್ಯ
ಆದರೆ, ಯಾವಾಗ ಆ ಗ್ರೂಪ್‌ನ ಹೆಸರು "MMH X SAKSHAM" ಎಂದು ಅವರ ಕಣ್ಣಿಗೆ ಬಿತ್ತೋ, ಆಗ ಅವರ ಆತಂಕವೆಲ್ಲ ದೂರವಾಯಿತು. ತಮ್ಮ ಉದ್ಯೋಗಿಗಳು ಈ ಗ್ರೂಪ್ ಅನ್ನು ಬಾಸ್ ವಿರುದ್ಧವಾಗಿ ಮಾಡಿಲ್ಲ, ಬದಲಾಗಿ ಬಾಸ್ ಇಲ್ಲದೆಯೇ ಕಂಪನಿಯ ಕೆಲಸಗಳನ್ನ ಸುಗಮವಾಗಿ ನಿರ್ವಹಿಸಲು ಮಾಡಿದ್ದಾರೆ ಎಂಬ ಸತ್ಯ ಅವರಿಗೆ ಅರ್ಥವಾಯಿತು.
ತಾವು ಈಗ ತಮ್ಮದೇ ಕಂಪನಿಯ ಕ್ಲೈಂಟ್ ಆಗಿದ್ದೇನೆ ಎಂದು ಸಕ್ಷಮ್ ಸಂತಸದಿಂದ ಹೇಳಿಕೊಂಡಿದ್ದಾರೆ. ಕಚೇರಿಯಲ್ಲಿ ತಮ್ಮ ಅಗತ್ಯವಿಲ್ಲದ ಕೆಲಸಗಳನ್ನ ಉದ್ಯೋಗಿಗಳೇ ನಿಭಾಯಿಸುತ್ತಿರುವುದು ಅವರಿಗೆ ಹೆಮ್ಮೆ ತರಿಸಿದೆ.
ತಮ್ಮ ಉದ್ಯೋಗಿಗಳು ಕಚೇರಿಯ ದಿನನಿತ್ಯದ ಕೆಲಸಗಳನ್ನ, ಮುಗಿದಿರುವ ಪ್ರಾಜೆಕ್ಟ್‌ಗಳನ್ನ ಮತ್ತು ಬಾಕಿ ಇರುವ ಕೆಲಸಗಳನ್ನ ಈ ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚಿಸುತ್ತಾರೆ ಎಂದು ಸಕ್ಷಮ್ ವಿವರಿಸಿದ್ದಾರೆ. ಸಂಸ್ಥಾಪಕರ ಮಧ್ಯಪ್ರವೇಶವಿಲ್ಲದೆ ಪರಿಹರಿಸಬಹುದಾದ ಎಲ್ಲ ಸಣ್ಣಪುಟ್ಟ ಸಮಸ್ಯೆಗಳನ್ನ ಅವರೇ ಬಗೆಹರಿಸಿಕೊಳ್ಳುತ್ತಾರೆ.
ಕೇವಲ ಸಂಸ್ಥಾಪಕರ ಗಮನಹರಿಸಲೇಬೇಕಾದ ಪ್ರಮುಖ ವಿಷಯಗಳನ್ನ ಮಾತ್ರ ಸಕ್ಷಮ್ ಬಳಿ ತರುತ್ತಾರೆ. ಇದರಿಂದಾಗಿಯೇ, ಸಕ್ಷಮ್ ಅವರು ಆಫೀಸ್‌ನಲ್ಲಿ "ಏನಾದರೂ ಅಪ್ಡೇಟ್ಸ್ ಇದೆಯಾ?" ಎಂದು ಕೇಳಿದಾಗಲೆಲ್ಲ ಉದ್ಯೋಗಿಗಳು, "ಏನಿಲ್ಲ ಸಕ್ಷಮ್, ಎಲ್ಲವನ್ನೂ ನಾವು ನೋಡಿಕೊಂಡಿದ್ದೇವೆ" ಎಂದು ಉತ್ತರಿಸುತ್ತಿದ್ದರು.
ಉತ್ತಮ ನಾಯಕತ್ವ ಮತ್ತು ನೇಮಕಾತಿಗೆ ಇದೇ ಸಾಕ್ಷಿ
ಆರಂಭದಲ್ಲಿ ತನಗೆ ಕೈಕೊಟ್ಟರು ಎಂದುಕೊಂಡಿದ್ದ ಸಕ್ಷಮ್, ಆನಂತರ ಇದುವೇ ಒಂದು ಒಳ್ಳೆ ತಂಡದ ಲಕ್ಷಣ ಎಂಬುದನ್ನ ಅರಿತುಕೊಂಡರು. "ಒಬ್ಬ ಸಂಸ್ಥಾಪಕನ ಕೆಲಸ ಎಲ್ಲವನ್ನೂ ತಾನೇ ನಿರ್ವಹಿಸುವುದಲ್ಲ. ಬದಲಾಗಿ, ಸಣ್ಣಪುಟ್ಟ ಜವಾಬ್ದಾರಿಗಳನ್ನ ಸ್ವತಂತ್ರವಾಗಿ ನಿಭಾಯಿಸುವ ಸಾಮರ್ಥ್ಯವಿರುವವರನ್ನ ಕೆಲಸಕ್ಕೆ ತೆಗೆದುಕೊಂಡು, ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವತ್ತ ಗಮನ ಹರಿಸಬೇಕು" ಎಂದು ಅವರು ಬರೆದುಕೊಂಡಿದ್ದಾರೆ.
ಸಕ್ಷಮ್ ಅವರ ಈ ಲಿಂಕ್ಡ್‌ಇನ್ ಪೋಸ್ಟ್ ಈಗ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. "ಇದೇ ನಿಜವಾದ ಉತ್ತಮ ನಾಯಕತ್ವ ಮತ್ತು ನೇಮಕಾತಿ ಪ್ರಕ್ರಿಯೆ. ಬಾಸ್ ಮೇಲೆ ಅವಲಂಬಿತರಾಗದೆ ಕೆಲಸ ಮಾಡುವ ತಂಡವನ್ನು ಹೊಂದುವುದು ನಿಜಕ್ಕೂ ಹೆಮ್ಮೆಯ ವಿಚಾರ" ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ.


Click it and Unblock the Notifications
