ಇಂದ್ರಯಾಣಿ ಸೇತುವೆ ಕುಸಿದು ಹಲವು ಮಂದಿ ನೀರುಪಾಲು, 32 ಜನರಿಗೆ ಗಾಯ
ಮಹಾರಾಷ್ಟ್ರದ ಪುಣೆ ಬಳಿಯ ಕುಂದಮಾಲ ಗ್ರಾಮದ ಬಳಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿರುವ ಘಟನೆ ನಡೆದಿದ್ದು, ಹಲವು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, 32 ಜನರು ಗಾಯಗೊಂಡಿದ್ದಾರೆ ಮತ್ತು ಆರು ಜನರನ್ನು ರಕ್ಷಿಸಲಾಗಿದೆ. ಆದರೆ ಕೆಲವು ವ್ಯಕ್ತಿಗಳು ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದ ಮಾವಲ್ ತಹಸಿಲ್‌ನಲ್ಲಿರುವ ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಸಮಯದಲ್ಲಿ ಹಲವಾರು ಜನರು ಅದರ ಮೇಲೆ ನಡೆಯುತ್ತಿದ್ದರು ಹಾಗೂ ನಿಂತಿದ್ದರು ಎನ್ನಲಾಗಿದೆ. ಕಬ್ಬಿಣದ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಸೇತುವೆ ಕುಸಿದಿದ್ದರಿಂದ ಹಲವರು ನೀರುಪಾಲಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸೇತುವೆಯ ಮೇಲೆ ಸುಮಾರು 125 ಪ್ರವಾಸಿಗರು ಒಂದೇ ಸ್ಥಳದಲ್ಲಿ ನಿಂತಿದ್ದರು. ಅದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು. ಸುಮಾರು 20-25 ಜನರು ನದಿಯ ದಡಕ್ಕೆ ಸಿಲುಕಿದರು. ಅವರಲ್ಲಿ ಕೆಲವರನ್ನು ಸ್ಥಳೀಯ ಕಾರ್ಮಿಕರು ಹೊರತೆಗೆದರು. ಆದರೆ 4-5 ಜನರು ಇನ್ನೂ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದು ಹಳೆಯ ಶಿಥಿಲಗೊಂಡ ಕಬ್ಬಿಣದ ಸೇತುವೆಯಾಗಿದ್ದು, ಸಂಜೆ 4 ಗಂಟೆ ಸುಮಾರಿಗೆ ಕುಸಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ 2 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 5-7 ಜನರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ ವಿಶಾಲ್ ಗಾಯಕ್ವಾಡ್ ಹೇಳಿದ್ದಾರೆ.
ಈ ಸೇತುವೆಯನ್ನು 30 ವರ್ಷಗಳ ಹಿಂದೆ ರೈತರ ಸಂಚಾರಕ್ಕಾಗಿ ನಿರ್ಮಿಸಲಾಗಿತ್ತು. ಆದರೆ ಪ್ರವಾಸಿಗರು ಮತ್ತು ದ್ವಿಚಕ್ರ ವಾಹನಗಳ ಅತಿಯಾದ ಹೊರೆಯಿಂದಾಗಿ ಈ ಸೇತುವೆ ಕುಸಿದು ಬಿದ್ದಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಪಿಂಪ್ರಿ-ಚಿಂಚ್‌ವಾಡ್ ಮತ್ತು ಎನ್‌ಡಿಆರ್‌ಎಫ್ ಸಂಪೂರ್ಣ ಬೆಂಬಲ ನೀಡುತ್ತಿವೆ. ನಾವು ಕಾಲ ಕಾಲಕ್ಕೆ ಅದನ್ನು ದುರಸ್ತಿ ಮಾಡುತ್ತಿದ್ದೆವು. ಪ್ರವಾಸಿಗರ ಪ್ರವೇಶವನ್ನು ನಿರಾಕರಿಸುತ್ತಿದ್ದೆವು. ಆದರೆ ಅವರು ಇಲ್ಲಿಗೆ ಬಂದು ದುರಂತ ಸಂಭವಿಸಿದೆ ಎಂದು ಎನ್‌ಸಿಪಿ ಶಾಸಕ ಸುನಿಲ್ ಶೆಲ್ಕೆ ಹೇಳಿದ್ದಾರೆ.
ಕೆಲವು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರು ಸಿಲುಕಿಕೊಂಡಿದ್ದಾರೆ. ಎನ್‌ಡಿಆರ್‌ಎಫ್ ತಂಡ ಅಲ್ಲಿಗೆ ತಲುಪುತ್ತಿದೆ. ಕೆಲವು ಜನರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಈ ಸಂಬಂಧ ಸಾವುನೋವುಗಳ ಬಗ್ಗೆ ನಮಗೆ ಇನ್ನೂ ಯಾವುದೇ ದೃಢ ಮಾಹಿತಿ ಬಂದಿಲ್ಲ. ಆದ್ದರಿಂದ ಈಗ ಇದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಸಂಪೂರ್ಣ ಮಾಹಿತಿ ಪಡೆದ ನಂತರವೇ ನಾನು ಇದರ ಬಗ್ಗೆ ಮಾಹಿತಿ ನೀಡುತ್ತೇನೆ. ಇದೀಗ ಆಡಳಿತವು ಜನರಿಗೆ ಪರಿಹಾರ ಒದಗಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.












Click it and Unblock the Notifications