ಮೋದಿಗೆ ವೀಸಾ ನಿರಾಕರಿಸಿದ ದೇಶದಲ್ಲೀಗ ಎಂಥ ನೈಸಾದ ಸ್ವಾಗತ!
ಒಂದು ಕಾಲವಿತ್ತು. ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನಿರಾಕರಣೆ ಎಂಬುದೇ ದೊಡ್ಡ ಸುದ್ದಿಯಾಗಿ, ಅದೇ ವಿಚಾರವಾಗಿ ವಿಪಕ್ಷಗಳು ಅವರನ್ನು ಮುಜುಗರಕ್ಕೆ ಈಡು ಮಾಡಲು ಪ್ರಯತ್ನಿಸುತ್ತಿದ್ದವು. ಆದರೆ ಈಗ ಎಲ್ಲವೂ ಬದಲಾಗಿದೆ. ಮೋದಿ ಭಾರತದ ಪ್ರಧಾನಿ. ಅಮೆರಿಕಕ್ಕೆ ಅವರು ಬರಲಿ ಎಂದು ನಿರೀಕ್ಷೆ ಮಾಡುವವರು ಸಹ ಇದ್ದಾರೆ.
ಅಂತೂ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ನಾನಾ ದೇಶಗಳಿಗೆ ತೆರಳಿ ಭಾರತದೊಂದಿಗೆ ಬಾಂಧವ್ಯವನ್ನು ಗಟ್ಟಿ ಮಾಡುತ್ತಿದ್ದಾರೆ ಮೋದಿ. ಅಷ್ಟೇ ಅಲ್ಲ. ಸಂಬಂಧಗಳ ನವೀಕರಣ ಆಗುತ್ತಿದೆ. ಇಲ್ಲಿನ ಚಿತ್ರ ಅಮೆರಿಕ ಅಧ್ಯಕ್ಷರ ಜತೆಗಿನ ಅಪ್ಪುಗೆಯನ್ನು ಮಾತ್ರ ಬಿಂಬಿಸುತ್ತಿಲ್ಲ. ಅದರ ಹಿಂದಿನ ಹಲವು ಉದ್ದೇಶಗಳು ಹಾಗೂ ಗುರಿಗಳನ್ನು ತೋರಗೊಡುತ್ತಿದೆ.
ಇನ್ನು ಮಿಸ್ ಇಂಡಿಯಾ ಚೆಲುವೆಯರನ್ನು ನೋಡಿದಿರಾ? ಮೊದಲಿಗಳಾಗಿ ಗೆದ್ದಾಕೆ, ಆ ನಂತರದ ಎರಡು ಸ್ಥಾನಗಳಲ್ಲಿ ಮಿಂಚು ಹರಿಸಿದವರು...ಒಟ್ಟಿನಲ್ಲಿ ಚೆಲುವೋ ಚೆಲುವು. ಒಂದಕ್ಕಿಂತ ಒಂದು ಮೆರುಗು. ಇನ್ನು ಈದ್ ಉಲ್ ಫಿತ್ರ್ ವಿಶೇಷವಾಗಿ ನಟ ಶಾರುಖ್ ಖಾನ್ ತಮ್ಮ ಮಗ ಅಬ್ರಾಂನೊಂದಿಗೆ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ.
ಇನ್ನೊಂದಿಷ್ಟು ಸುದ್ದಿ-ಫೋಟೋಗಳು ಇಲ್ಲಿವೆ.

ಅಮೆರಿಕದಲ್ಲಿ ಮೋದಿ ಹವಾ
ಅಮೆರಿಕಕ್ಕೆ ವೀಸಾ ನೀಡಲು ನಿರಾಕರಿಸಿದ್ದು ಇದೇ ನರೇಂದ್ರ ಮೋದಿ ಅವರಿಗಾ? ಕಾಲ ಹೇಗೆ ಬದಲಾಗುತ್ತದೆ ನೋಡಿ, ವಾಷಿಂಗ್ಟನ್ ಡಿಸಿಯಲ್ಲಿ ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ ನಂತರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಗೆದ್ದ ಸಂಭ್ರಮದಲ್ಲಿ
ಮಿಸ್ ಇಂಡಿಯಾ 2017ರ ಕಿರೀಟ ಧರಿಸಿದ ಪ್ರಿಯದರ್ಶಿನಿ ಚಟರ್ಜಿ, ಸೆಕೆಂಡ್ ರನ್ನರ್ ಅಪ್ ಪಂಕುರಿ ಗಿಡ್ವಾನಿ ಹಾಗೂ ಫಸ್ಟ್ ರನ್ನರ್ ಅಪ್ ಸುಶ್ರುತಿ ಕೃಷ್ಣ ಮುಂಬೈನಲ್ಲಿ ಕ್ಯಾಮೆರಾಗೆ ಪೋಸು ಕೊಟ್ಟಿದ್ದು ಹೀಗೆ.

ಈ ಮನುಷ್ಯನನ್ನು ನೋಡಿ ನಾವು ಅಚ್ಚರಿಯಾಗಬೇಕು...
ಜೆಕ್ ರಿಪಬ್ಲಿಕ್ ನ ಒಸ್ತ್ರಾವದಲ್ಲಿ ಬುಧವಾರ ನಡೆಯುವ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ ಮೀಟ್ ನ ನೂರು ಮೀಟರ್ ಸ್ಪರ್ಧೆಯಲ್ಲಿ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಕಾಣಿಸಿಕೊಂಡ ಭಂಗಿಯಿದು.

ಸಿಂಹಕ್ಕೆ ಏನು ಸ್ಕೂಲ್ ಯೋಚನೆಯಾ?
ಜರ್ಮನಿಯ ನುವೇಡ್ ಪ್ರಾಣಿ ಸಂಗ್ರಹಾಲಯದಲ್ಲಿ ತಂದೆ ಸಿಂಹದ ಜತೆಗೆ ಇರುವ ಮರಿ ಸಿಂಹ. ತಂದೆಯನ್ನು ನೋಡಿದರೆ ಮರಿಯ ಭವಿಷ್ಯ, ಸ್ಕೂಲ್ ಅಡ್ಮಿಷನ್, ಇನ್ಷೂರೆನ್ಸ್, ಸೇವಿಂಗ್ಸ್ ಅಂತ ಯೋಚಿಸುತ್ತಿರುವಂತಿಲ್ಲವೆ!

ರಂಜಾನ್ ಸಂಭ್ರಮದಲ್ಲಿ ಮಗನ ಜತೆಗೆ ಶಾರುಖ್
ಬಾಲಿವುಡ್ ನಟ ಶಾರುಖ್ ಖಾನ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಈದ್ ಉಲ್ ಫಿತ್ರ್ ಸಂಭ್ರಮದಲ್ಲಿ ಮಗ ಅಬ್ರಾಂ ಜತೆಗೆ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದು ಹೀಗೆ.












Click it and Unblock the Notifications