ಕನ್ನಡಿಗರಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭ ಕೋರಿದ ಮೋದಿ
ನವದೆಹಲಿ: ಕರ್ನಾಟಕದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸಂಕ್ರಾಂತಿ ಶುಭಾಶಯಗಳನ್ನು ಟ್ವೀಟ್ ಮಾಡಿರುವ ಅವರು, ಮಕರ ಸಂಕ್ರಾಂತಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ಇದೊಂದು ವಿಶೇಷವಾದ ಹಬ್ಬ. ಇದು ಪ್ರತಿಯೊಬ್ಬರ ಜೀವನದಲ್ಲಿ ಆನಂದ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಆಶಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ತೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಸಂಕ್ರಾಂತಿಯು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ದೇಶಾದ್ಯಂತ ವಿವಿಧ ರೂಪಗಳಲ್ಲಿ, ಆದರೆ ಅಷ್ಟೇ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮನ್ನೆಲ್ಲ ಒಟ್ಟಾಗಿ ಬೆಸೆಯುವ ಒಗ್ಗಟ್ಟಿನ ಭಾವನೆಯನ್ನು ನೆನಪಿಸುತ್ತದೆ.

ಈ ಹಬ್ಬವು ನಮ್ಮ ರೈತರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು ನಮ್ಮ ಅನ್ನದಾತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆ ಮೂಲಕ ನಮ್ಮ ಸಮಾಜವನ್ನು ಬಲಪಡಿಸುವ ಸಂದರ್ಭವಾಗಿದೆ. ಸಂಕ್ರಾಂತಿಯು ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನಿಮ್ಮ ಮುಂದಿನ ದಿನಗಳು ಯಾವಾಗಲೂ ಸಮೃದ್ಧಿ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ನಿಮ್ಮ ಮನೆಯಲ್ಲಿ ಸಂತೋಷ ನೆಲೆಸಲಿ, ನಿಮ್ಮೆಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಲಿ ಎಂದು ಮೋದಿ ತಿಳಿಸಿದ್ದಾರೆ.
ಮೋದಿಗೆ ಧನ್ಯವಾದ ತಿಳಿಸಿದ ಹೆಚ್ ಡಿ ಕುಮಾರಸ್ವಾಮಿ
ಕರ್ನಾಟಕದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಎಲ್ಲಾ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅತಿ ಮುಖ್ಯವಾಗಿ ಅವರು #ನಮ್ಮಕನ್ನಡ ದಲ್ಲಿ ಶುಭ ಕೋರಿರುವುದು ಅತ್ಯಂತ ಸಂತೋಷದ ಸಂಗತಿ.
ಸಂಕ್ರಾಂತಿ ರೈತಾಪಿ ಜನರ ಹಬ್ಬ, ಸುಖ ಸಮೃದ್ಧಿಯ ಸಂಕೇತ. ಕನ್ನಡಿಗರ ಆಚಾರ, ಪರಂಪರೆಯಲ್ಲಿ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಾನ್ಯ ಪ್ರಧಾನಿಗಳ ಸಂದೇಶವು ಎಲ್ಲಾ ಕನ್ನಡ ಹೃದಯಗಳಿಗೆ ಸಂತಸ ಉಂಟು ಮಾಡಿದೆ. ಧನ್ಯವಾದಗಳು ಸರ್ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications