11 ರಾಜ್ಯಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಳಿಗೆ ಪ್ರಧಾನಿ ಮೋದಿಯಿಂದ ಚಾಲನೆ, ಸಂಚಾರ ಎಲ್ಲಿ ತಿಳಿಯಿರಿ
ನವದೆಹಲಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 11 ರಾಜ್ಯಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
ಭಾರತೀಯ ರೈಲ್ವೆ ಒಂದೇ ಬಾರಿಗೆ ಒಂಬತ್ತು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ್ದು ಇದೇ ಮೊದಲು. "ರೈಲಿನ ವೇಗ, ಮೂಲಸೌಕರ್ಯ ಅಭಿವೃದ್ಧಿಯ ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ತಕ್ಕಂತಿದೆ. ಇಂದು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ನ ಜನರು ಈ ಸೌಲಭ್ಯವನ್ನು ಪಡೆಯುತ್ತಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಹೊಸ ಶಕ್ತಿಯನ್ನು ಬಿಂಬಿಸುತ್ತವೆ" ಎಂದು ಪ್ರಧಾನಿ ಹೇಳಿದರು.

ಪ್ರಸ್ತುತ, ಭಾರತೀಯ ರೈಲ್ವೆ ಇಲಾಖೆಯ 25 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಇನ್ನೂ ಒಂಬತ್ತು ರೈಲುಗಳನ್ನು ಪ್ರಾರಂಭಿಸುವುದರೊಂದಿಗೆ, ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ 34 ಕ್ಕೆ ತಲುಪಿದೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರು ನವದೆಹಲಿ ರೈಲು ನಿಲ್ದಾಣದಿಂದ ಚಾಲನೆ ನೀಡಿದ್ದರು.
ಸೆಮಿ ಹೈಸ್ಪೀಡ್ ರೈಲುಗಳು ಪ್ರಾರಂಭವಾದಾಗಿನಿಂದ, ಒಟ್ಟು 1.11 ಕೋಟಿ ಪ್ರಯಾಣಿಕರು ಅದರಲ್ಲಿ ಪ್ರಯಾಣಿಸಿದ್ದಾರೆ. ಇಂದು ಚಾಲನೆಗೊಂಡ 9 ವಂದೇ ಭಾರತ್ ಸಂಚರಿಸುವ ಮಾರ್ಗಗಳು ಹೀಗಿವೆ: ಹೈದರಾಬಾದ್ (ಕಾಚಿಗುಡ)-ಬೆಂಗಳೂರು (ಯಶವಂತಪುರ), ಚೆನ್ನೈ-ತಿರುನೆಲ್ವೇಲಿ, ವಿಜಯವಾಡ-ಚೆನ್ನೈ, ಪಾಟ್ನಾ-ಹೌರಾ, ರೂರ್ಕೆಲಾ-ಪುರಿ, ಕಾಸರಗೋಡು-ಆಲಪ್ಪುಳ-ತಿರುವನಂತಪುರ, ಜೈಪುರ-ಉದಯಪುರ, ರಾಂಚಿ-ಟಾಟಾನಗರ-ಕೋಲ್ಕತ್ತಾ, ಜಾಮ್‌ನಗರ-ರಾಜ್‌ಕೋಟ್-ಅಹಮದಾಬಾದ್.
ಜುಲೈ 7 ರಂದು ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜೋಧ್‌ಪುರ-ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ ನಂತರ ಸುಮಾರು ಎರಡು ತಿಂಗಳ ನಂತರ ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಈ ಒಂಬತ್ತು ರೈಲುಗಳು ಹನ್ನೊಂದು ರಾಜ್ಯಗಳಾದ ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ಗೆ ಸಂಪರ್ಕವನ್ನು ಹೆಚ್ಚಿಸಲಿವೆ ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
"ಈ ವಂದೇ ಭಾರತ್ ರೈಲುಗಳು ಎಲ್ಲ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲುಗಳಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಮಾರ್ಗದಲ್ಲಿ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ರೂರ್ಕೆಲಾ-ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 3 ಗಂಟೆಗಳ ಕಾಲ ವೇಗವಾಗಿರುತ್ತದೆ.
ಹೈದರಾಬಾದ್ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 2.5 ಗಂಟೆಗಳಿಗಿಂತ ಹೆಚ್ಚು, ತಿರುನಲ್ವೇಲಿ-ಮದುರೈ- ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ 2 ಗಂಟೆಗಳಿಗಿಂತ ಹೆಚ್ಚು, ರಾಂಚಿ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜಾಮ್‌ನಗರ- ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 1 ಗಂಟೆ ಮತ್ತು ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು ಅರ್ಧ ಗಂಟೆ ಹೆಚ್ಚು ಎಂದು ಹೇಳಿಕೆ ತಿಳಿಸಿದೆ.
ದೇಶದಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ಆಕಾಂಕ್ಷೆಗೆ ಅನುಗುಣವಾಗಿ, ರೂರ್ಕೆಲಾ-ಭುವನೇಶ್ವರ್-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಮುಖ ಧಾರ್ಮಿಕ ಪಟ್ಟಣಗಳಾದ ಪುರಿ ಮತ್ತು ಮಧುರೈಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ, ವಿಜಯವಾಡ - ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತಿರುಪತಿ ಯಾತ್ರಾ ಕೇಂದ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ" ಎಂದು ಪ್ರಕಟಣೆ ತಿಳಿಸಿದೆ.
ಈ ವಂದೇ ಭಾರತ್ ರೈಲುಗಳ ಪರಿಚಯವು ದೇಶದಲ್ಲಿ ಹೊಸ ಗುಣಮಟ್ಟದ ರೈಲು ಸೇವೆಗೆ ನಾಂದಿ ಹಾಡಲಿದೆ. ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕವಚ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ರೈಲುಗಳು ಸಾಮಾನ್ಯ ಜನರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಪ್ರವಾಸಿಗರಿಗೆ ಆಧುನಿಕ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಮುಖ ಹೆಜ್ಜೆಯಾಗಿದೆ.












Click it and Unblock the Notifications