Breaking: ರಾಷ್ಟ್ರಪತಿ ಚುನಾವಣೆಯಿಂದ ಹಿಂದೆ ಸರಿದ ಗಾಂಧಿ ಮೊಮ್ಮಗ
ನವದೆಹಲಿ, ಜೂನ್ 20: ಮುಂಬರುವ ರಾಷ್ಟ್ರಪತಿ ಚುನಾವಣೆಗಾಗಿ ವಿರೋಧ ಪಕ್ಷದಿಂದ ಒಮ್ಮತ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮುಂದುವರೆದಿದೆ. ಈ ನಡುವೆ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ತಮ್ಮ ನಿರ್ಣಯ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ತಮಗೆ ವಿರೋಧ ಪಕ್ಷದ ನಾಯಕರು ನೀಡಿರುವ ಮನವಿಯನ್ನು ವಿನಮ್ರವಾಗಿ ತಿರಸ್ಕರಿಸುತ್ತಿರುವುದಾಗಿ ಗೋಪಾಲಕೃಷ್ಣ ಗಾಂಧಿ ಸೋಮವಾರದಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಎಂದು ಸುದ್ದಿ ಹಬ್ಬಿತ್ತು. ಆದರೆ, ತಮ್ಮ ಉಮೇದುವಾರಿಕೆ ಸಲ್ಲಿಸದಿರುವಲು ಗಾಂಧಿ ನಿರ್ಧರಿಸಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಲು ಹಲವಾರು ಗೌರವಾನ್ವಿತ ನಾಯಕರು ತಮ್ಮ ಬಗ್ಗೆ ಯೋಚಿಸುವ ಗೌರವವನ್ನು ಮಾಡಿದ್ದಾರೆ ಎಂದು ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ ವಿಷಯವನ್ನು ಆಳವಾಗಿ ಪರಿಗಣಿಸಿದ ನಂತರ ವಿರೋಧ ಪಕ್ಷದ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಮತ್ತು ರಾಷ್ಟ್ರೀಯ ವಾತಾವರಣವನ್ನು ಸೃಷ್ಟಿಸುವ ಒಬ್ಬರಾಗಿರಬೇಕು ಎಂದು ನಾನು ನೋಡುತ್ತೇನೆ. ವಿರೋಧ ಪಕ್ಷಗಳ ಒಗ್ಗಟ್ಟಿನ ಜೊತೆಗೆ ಇದನ್ನು ಉತ್ತಮವಾಗಿ ಮಾಡುವ ಇತರರು ಇರುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿಯವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ವಿಪಕ್ಷಗಳು ಸೂಚಿಸಿದ್ದು, ಇದೇ ಮೊದಲಲ್ಲ. 2017ರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ ಉತ್ತರಾಧಿಕಾರಿಯಾಗಬಹುದು ಎಂದೆನಿಸಲಾಗಿತ್ತು.
ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿಯವರನ್ನು ಆಯ್ಕೆ ಮಾಡಿದ್ದಕ್ಕೆ ಶಿವಸೇನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಕಿಡಿಕಾರಿತ್ತು.
ಮಹಾತ್ಮ ಗಾಂಧಿ ಮೊಮ್ಮಗನಾಗಿರುವ ಗೋಪಾಲ ಕೃಷ್ಣ ಗಾಂಧಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ವೇಳೆ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಗಲ್ಲು ಶಿಕ್ಷೆ ರದ್ದು ಕೋರಿ ಯಾಕೂಬ್ ಮೆಮೊನ್ ಸಲ್ಲಿಸದ್ದ ಅರ್ಜಿಯನ್ನು ತಿರಸ್ಕರಿಸಿದ ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಎಂದು ಕೋರಿಕೊಂಡಿದ್ದರು. ಇಂಥ ವ್ಯಕ್ತಿಯನ್ನು ದೇಶದ ಉನ್ನತ ಹುದ್ದೆಗೆ ಸ್ಪರ್ಧಿಸಲು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಶಿವಸೇನೆ ವಾದಿಸಿತ್ತು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹುಟ್ಟಿದ್ದು 1946, ಏಪ್ರಿಲ್ 22 ರಂದು. 2004 ರಿಂದ 2009ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಇವರು ಮಾಜಿ ಐಎಎಸ್ ಅಧಿಕಾರಿಯಾಗಿ ರಾಷ್ಟ್ರಪತಿಗಳ ಆಪ್ತಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.












Click it and Unblock the Notifications