ಬಿಜೆಪಿ ಟಿಕೆಟಿನಿಂದ ಖ್ಯಾತ ಬಾಲಿವುಡ್ ನಟಿ ಕಣಕ್ಕೆ?
ಮುಂಬೈ, ಮಾ 4: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದಿನಕ್ಕೊಂದು ಹೊಸ ಹೊಸ ಹೆಸರುಗಳು ತೇಲಿ ಬರುತ್ತಲೇ ಇರುತ್ತವೆ. ಈ ಸಾಲಿಗೆ ಈಗ ಮತ್ತೊಂದು ಖ್ಯಾತ ಬಾಲಿವುಡ್ ನಟಿಯೊಬ್ಬರ ಹೆಸರು ಸೇರ್ಪಡೆಯಾಗಿದೆ.
ಈ ಹೆಸರುಗಳಲ್ಲಿ ಕೊನೆಗೆ ಅಂತಿಮವಾಗುವುದು ಯಾವುದು ಎನ್ನುವುದು ಪಕ್ಷಗಳು ಬಿ ಫಾರಂ ನೀಡಿದ ಮೇಲಷ್ಟೇ ಖಾತ್ರಿ ಯಾಗುವುದು. ಪ್ರತಿಷ್ಠಿತ ಮುಂಬೈ ಉತ್ತರ ಕೇಂದ್ರ (North Central) ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ರಭಲ ಪೈಪೋಟಿ ನೀಡಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.
ಖ್ಯಾತ ಬಾಲಿವುಡ್ ತಾರಾ ಜೋಡಿಗಳಾದ ಸುನಿಲ್ ದತ್ ಮತ್ತು ನರ್ಗಿಸ್ ದಂಪತಿಯ ಮಗಳು, ಹಾಲಿ ಕಾಂಗ್ರೆಸ್ ಸಂಸದೆ ಪ್ರಿಯಾ ದತ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಶತಾಯುಗತಾಯು ಸೋಲುಣಿಸಲು ಬಿಜೆಪಿ, ಖ್ಯಾತ ಬಾಲಿವುಡ್ ನಟಿ ಪ್ರೀತಿ ಜಿಂಟಾ ಮನವೊಲಿಸಲು ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಢಿ ಸತತವಾಗಿ ಬಿಜೆಪಿಯಿಂದ ಕೈತಪ್ಪುತ್ತಿರುವ ಈ ಕ್ಷೇತ್ರವನ್ನು ತನ್ನದಾಗಿಸಿ ಕೊಳ್ಳಲು ಸೆಲೆಬ್ರಿಟಿ ಜಗತ್ತಿನ ಜನಪ್ರಿಯ ಮುಖವೊಂದನ್ನು ಆಖಾಡಕ್ಕಿಳಿಸಲು ಉತ್ಸುಕರಾಗಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.

ಪ್ರಿಯಾ ದತ್ ವಿರುದ್ದ ಸೂಕ್ತ ಅಭ್ಯರ್ಥಿ
2004ರಿಂದ ಸತತವಾಗಿ ಈ ಕ್ಷೇತ್ರದಿಂದ ಜಯಗಳಿಸುತ್ತಿರುವ ಪ್ರಿಯಾ ದತ್ ಅವರನ್ನು ಸೋಲಿಸಲು ಸೂಕ್ತ ಹುಡುಕಾಟದಲ್ಲಿದ್ದಾಗ ರೂಢಿ, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಪ್ರೀತಿ ಜಿಂಟಾ ಹೆಸರನ್ನು ಸೂಚಿಸಿದ್ದಾರೆ. ರೂಢಿ ಮತ್ತು ಪ್ರೀತಿ ದೂರದ ಸಂಬಂಧಿಗಳಾಗಿರುವುದರಿಂದ ಪ್ರೀತಿ ಮನವೊಲಿಸಲು ಬಿಜೆಪಿ, ರೂಢಿಗೆ ಸೂಚಿಸಿದೆ ಎಂದು ವರದಿಯಾಗಿದೆ.

ಬಿಜೆಪಿ ಆಫರಿಗೆ ಪ್ರೀತಿ ಏನಂದರು?
ಆದರೆ, ಸದ್ಯದ ಮಾಹಿತಿಯ ಪ್ರಕಾರ ಪ್ರೀತಿ, ಬಿಜೆಪಿ ನೀಡಿದ ಪ್ರಸ್ತಾವನೆಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ಕೈತುಂಬಾ ಸಿನಿಮಾಗಳನ್ನು ಒಪ್ಪಿ ಕೊಂಡುರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದು ಎನ್ನುವ ಮಾತನ್ನು ರೂಢಿಯವರಿಗೆ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಪ್ರಯತ್ನ ಮುಂದುವರಿಸಿದ ರೂಢಿ
ಆದರೂ ರೂಢಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದು, ಪ್ರೀತಿ ಮನವೊಲಿಸುವ ವಿಶ್ವಾಸವನ್ನು ಹೊಂದಿದ್ದಾರೆನ್ನಲಾಗುತ್ತಿದೆ. ಪ್ರಿಯಾ ದತ್ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಹೊಂದಿದ್ದರೂ, ಕೇಂದ್ರದಲ್ಲಿ ಯುಪಿಎ ಸರಕಾರದ ವೈಫಲ್ಯತೆ ಮತ್ತು ಮೋದಿ ಜನಪ್ರಿಯತೆಯನ್ನು ಉಪಯೋಗಿಸಿಕೊಂಡು ಜಯಗಳಿಸ ಬಹುದು ಎಂದು ರೂಢಿ, ಪ್ರೀತಿಗೆ ಮನವರಿಕೆ ಮಾಡುತ್ತಿದ್ದಾರೆ.

ಜನಾನುರಾಗಿ ಸಂಸದೆ
ಪ್ರಿಯಾ ದತ್ 2004 ಮತ್ತು 2009ರಲ್ಲಿ ಸತತವಾಗಿ ಜಯಗಳಿಸಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಹೊಂದಿರುವ ಪ್ರಿಯಾ ದತ್, ಜನಾನುರಾಗಿ ಮತ್ತು ಕ್ಷೇತ್ರದ ಜನತೆಗೆ ಸುಲಭವಾಗಿ ಸಿಗುವಂತಹ ಸಂಸದೆ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕೊನೆಯದಾಗಿ ಪ್ರೀತಿ ಮನವೊಲಿಕೆ
ಬಿಜೆಪಿ ಸತತವಾಗಿ ಈ ಕ್ಷೇತ್ರದಿಂದ ಸೋಲು ಅನುಭವಿಸುತ್ತಿದೆ. ಪ್ರಿಯಾ ದತ್ ವಿರುದ್ದ ಕಣಕ್ಕಿಳಿಯಲು ಬಿಜೆಪಿ, ಬಾಲಿವುಡ್ ಜಗತ್ತಿನ ಖ್ಯಾತ ನಾಮರ ಜೊತೆ ಚರ್ಚಿಸಿ ಅವರು ನಿರಾಕರಿಸಿದ್ದರಿಂದ ಪ್ರೀತಿ ಮನವೊಲಿಸಲು ಮುಂದಾಗಿದೆ.












Click it and Unblock the Notifications