ದುಬೈನಿಂದ ಭಾರತಕ್ಕೆ ಬರಲು ಸುಪ್ರೀಂ ಮೊರೆ ಹೋದ ಮಹಿಳೆ
ನವದೆಹಲಿ, ಏಪ್ರಿಲ್ 22 : ದುಬೈನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಭಾರತಕ್ಕೆ ಬರಲು ಅವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಲಾಕ್ ಡೌನ್ ಪರಿಣಾಮ ವಿಮಾನ ಸಂಚಾರ ರದ್ದಾಗಿದ್ದು, ಅಲ್ಲಿ ಸಿಲುಕಿದ್ದಾರೆ.
Recommended Video
ಕೇರಳ ಮೂಲದ ಗೀತಾ ಶ್ರೀಧರನ್ ಎಂಬ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಗೀತಾ ಅವರು ಗರ್ಭಿಣಿಯಾಗಿದ್ದು ಪತಿಯನ್ನು ಹೊರತುಪಡಿಸಿ ಯಾರೂ ನೋಡಿಕೊಳ್ಳುವವರಿಲ್ಲ. ಅವರು ಸಹ ಕೆಲಸಕ್ಕೆ ಹೋಗುತ್ತಿದ್ದು, ತೊಂದರೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಪತಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅದರ ಚಟುವಟಿಕೆಗಳು ಲಾಕ್ ಡೌನ್‌ನಿಂದ ಬಂದ್ ಆಗಿಲ್ಲ. ಆದ್ದರಿಂದ ಅವರು ರಜೆ ಹಾಕುವಂತಿಲ್ಲ ಎಂದು ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಗೀತಾ ಅರ್ಜಿಯಲ್ಲಿ ವಿವರಿಸಿದ್ದಾರೆ.

ಜುಲೈನಲ್ಲಿ ಗೀತಾ ಅವರ ಹೆರಿಗೆ ದಿನಾಂಕ ನಿಗದಿಯಾಗಿದೆ. ನಾನು ಭಾರತಕ್ಕೆ ಬರಬೇಕು. ಆದರೆ, ಲಾಕ್ ಡೌನ್ ಪರಿಣಾಮ ವಿಮಾನಗಳ ಹಾರಾಟವಿಲ್ಲ. ಆದ್ದರಿಂದ, ಸಹಾಯ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ದುಬೈನಿಂದ ವಾಪಸ್ ಆಗುವುದಕ್ಕೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಹಲವಾರು ಜನರು ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ. ಇದಕ್ಕಾಗಿ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೇರಳ ಮೂಲದ ಅನೇಕರು ದುಬೈನಲ್ಲಿದ್ದಾರೆ. ಹಲವಾರು ಜನರು ಲಾಕ್ ಡೌನ್ ಘೋಷಣೆಯಾಗುವ ಮೊದಲೇ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಭಾರತದಲ್ಲಿ ಮೇ 3ರ ತನಕ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ವಿಮಾನ ಹಾರಾಟ ಇರುವುದಿಲ್ಲ.












Click it and Unblock the Notifications