prashant kishor: ಒಂದು ಚುನಾವಣಾ ತಂತ್ರ ರೂಪಿಸಲು ನನ್ನ ಫೀಸ್ ₹100 ಕೋಟಿ!
ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳಿಗೆ ಚುನಾವಣಾ ಕಾರ್ಯತಂತ್ರ ರೂಪಿಸಲು ನಾನು ಬರೋಬ್ಬರಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಶುಲ್ಕವನ್ನು ಪಡೆಯುತ್ತೇನೆ ಎಂದು ಚುನಾವಣಾ ಚಾಣಕ್ಯ ಹಾಗೂ ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಹಿರಂಗಪಡಿಸಿದ್ದಾರೆ.
ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದ್ದು, ಸದ್ಯ ಈ ವಿಚಾರದ ಬಗ್ಗೆ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಶಾಂತ್ ಈ ವಿಚಾರ ರಿವೀಲ್ ಮಾಡಿದ್ದಾರೆ. ನನ್ನ ಕಾರ್ಯತಂತ್ರದ ಮೇಲೆ ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ಅಧಿಕಾರದಲ್ಲಿವೆ ಎಂದಿದ್ದಾರೆ.

ನನ್ನ ಪ್ರಚಾರಕ್ಕಾಗಿ ಟೆಂಟ್‌ಗಳು ಮತ್ತು ವೇದಿಕೆಗಳನ್ನು ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟು ದುರ್ಬಲ ಎಂದು ನೀವು ಭಾವಿಸುತ್ತೀರಾ? ಎಂದು ಪ್ರಶಾಂತ್ ಕಿಶೋರ್ ಜನರಿಗೆ ಪ್ರಶ್ನೆ ಕೇಳಿದ್ದಾರೆ. ಇನ್ನು ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿರಲು ಸಾಧ್ಯವೇ ಇಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಪ್ಲ್ಯಾನ್ ಕೊಟ್ಟರೆ ಅದಕ್ಕೆ ನನ್ನ ಶುಲ್ಕ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ.
ನಾನು ಮುಂದಿನ ಎರಡು ವರ್ಷಗಳವರೆಗೆ ಅಂತಹ ಒಂದು ಚುನಾವಣಾ ಕಾರ್ಯತಂತ್ರದೊಂದಿಗೆ ನನ್ನ ಪ್ರಚಾರವನ್ನು ನಡೆಸಬಹುದು ಎಂದು ಪ್ರಶಾಂತ್ ಕಿಶೋರ್ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿವಿಧ ಪಕ್ಷಗಳಿಗೆ ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸುವಲ್ಲಿ ಪ್ರಶಾಂತ್ ಖ್ಯಾತಿ ಪಡೆದಿದ್ದರು. ಇದೀಗ ಜನ್ ಸೂರಜ್ ಪಕ್ಷದ ಮೂಲಕ ರಾಜಕೀಯಕ್ಕೆ ತಾವೇ ಧುಮುಕಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಯ 2014ರ ಲೋಕಸಭಾ ಪ್ರಚಾರದ ಪ್ರಮುಖ ತಂತ್ರಗಾರರಾಗಿ ಪ್ರಶಾಂತ್ ಕಿಶೋರ್ ಗಮನ ಸೆಳೆದಿದ್ದರು. ಅದರಂತೆ ಬಿಜೆಪಿ ಭರ್ಜರಿಯಾಗಿ ಗೆದ್ದು ಬೀಗಿತ್ತು. ಇದಕ್ಕೆ ಪರೋಕ್ಷವಾಗಿ ಪ್ರಶಾಂತ್ ಕಿಶೋರ್ ಕಾರ್ಯತಂತ್ರವೇ ಕಾರಣ ಎನ್ನುವ ಮಾತಿದೆ.

2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಪ್ರಶಾಂತ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಅಲ್ಲಿ ಅವರು ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿಸಿ, ಬಿಜೆಪಿಯನ್ನು ಮಣಿಸಲು ಸಹಾಯ ಮಾಡಿದ್ದರು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ತಂತ್ರ ರೂಪಿಸಿದರೂ ಅದು ಕಾರ್ಯರೂಪಕ್ಕೆ ಬಾರದೆ ವಿಫಲವಾಗಿತ್ತು. ಆದರೆ, 2021ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಇದ್ದಿದ್ದು ಪ್ರಶಾಂತ್ ಎನ್ನಲಾಗಿದೆ.
2019ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಜಗನ್ ಮೋಹನ್ ರೆಡ್ಡಿ ವೈಎಸ್‌ಆರ್‌ಸಿಪಿ ಪಕ್ಷಕ್ಕೆ, 2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿಗೆ ಹಾಗೂ 2020ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷಗಳ ಗೆಲುವಿಗೂ ಪ್ರಶಾಂತ್ ಅವರ ಕಾರ್ಯತಂತ್ರವೇ ಕಾರಣ ಎಂದು ಹೇಳಲಾಗಿದೆ.












Click it and Unblock the Notifications