57ರೂಪಾಯಿ ಇತ್ಯರ್ಥಕ್ಕೆ 29 ವರ್ಷ ಕೋರ್ಟ್ ಸುತ್ತಾಡಿದ

UP Postman booked for pocketing and let off after 29 years
ಕಾನ್ಪುರ, ಡಿ 2: ಹಣೆಬರಹಕ್ಕೆ ಹೊಣೆಯಾರು ಅನ್ನುತ್ತಾರಲ್ಲಾ, ಬಹುಷಃ ಇದಕ್ಕೇ ಇರಬೇಕೇನೋ ಅಥವಾ ಈತನ ಅವಸ್ಥೆ ಕಂಡು ನಮ್ಮ ವ್ಯವಸ್ಥೆಯನ್ನು ದೂರಬೇಕೋ? ಒಟ್ಟಿನಲ್ಲಿ ಮಾಡದ ತಪ್ಪಿಗೆ ತನ್ನ ಜೀವನದ ಅಮೂಲ್ಯ 29 ವರ್ಷವನ್ನು ಕೋರ್ಟ್ ಸುತ್ತುವುದರಲ್ಲೇ ಕಳೆದವನ ಕಥೆ ಅಲ್ಲ ವ್ಯಥೆಯಿದು.

ಈ ಲೇಖನದ ಕಥಾನಾಯಕ ಉಮಾಕಾಂತ್ ಮಿಶ್ರಾ, ಈತ ಉತ್ತರ ಪ್ರದೇಶ ರಾಜ್ಯದ ಕಾನ್ಪುರ ನಗರದ ಹರಿಜಿಂದರ್ ಪೋಸ್ಟ್ ಆಫೀಸಿನ ಉದ್ಯೋಗಿ. ಹಿರಿಯ ಅಧಿಕಾರಿಗಳಿಂದ ಉತ್ತಮ ಹೆಸರನ್ನೇನೋ ಪಡೆದಿದ್ದ. ಆದರೆ, ಈತನ ಜೀವನದಲ್ಲಿ ಸುಮಾರು ಮೂರು ದಶಕಗಳ ಕೆಳಗೆ ನಡೆಯ ಬಾರದ ಘಟನೆ ನಡೆದು ಹೋಯಿತು.

ದಿನಾಂಕ 13.07.1984 ರಂದು ಉಮಾಕಾಂತ್ ಮಿಶ್ರಾನ ಮೇಲೆ ಶನಿ ಹೆಗಲೇರಿದ್ದನೇನೋ. ಅಂದು ಎಂದಿನಂತೆ ಮನಿ ಆರ್ಡರ್ ಬಟವಾಡೆ ಮಾಡಲು ಹೊರಟ ಮಿಶ್ರಾಗೆ ಗ್ರಾಹಕರಿಗೆ ಪಾವತಿಸ ಬೇಕಾಗಿದ್ದ ರೂಪಾಯಿ 57.60 ಕಣ್ತಪ್ಪಿನಿಂದ ಲೆಕ್ಕ ಸಿಗದೇ ಹೋಯಿತು.

ತನ್ನಿಂದಾದ ತಪ್ಪನ್ನು ನಿಯತ್ತಾಗಿ ಹಿರಿಯ ಅಧಿಕಾರಿಗಳಿಗೆ ವಿವರಿಸಿದ. ಏನದಾರೂ ಮಾಡಿ ಹಣ ಹೊಂದಿಸಿ ಕೊಂಡು ಬಂದು ಪಾವತಿಸ ಬೇಕಾದವರಿಗೆ ಕೊಡುತ್ತೇನೆ ಎಂದು ಹಿರಿಯ ಅಧಿಕಾರಿಗಳನ್ನು ಕೇಳಿಕೊಂಡ, ಅಂಗಲಾಚಿ ಬೇಡಿಕೊಂಡ.

ನೀನೇ ಈ ದುಡ್ಡನ್ನು ಕದ್ದು ನಾಟಕವಾಡುತ್ತಿದ್ದೀಯಾ ಎಂದು ಹಿರಿಯ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಈತನನ್ನು ಕೆಲಸದಿಂದ ಅಮಾನತುಗೊಳಿಸಿದರು. ಈತನನ್ನೇ ನಂಬಿಕೊಂಡಿದ್ದ ಕುಟುಂಬ ದಾರಿಗೆ ಬಿತ್ತು.

ತಂದೆಯ ಸ್ಥಾನದಲ್ಲಿದ್ದು ತನ್ನ ಮಕ್ಕಳಿಗೆ ಸೂಕ್ತವಾದ ವಿದ್ಯಾಭ್ಯಾಸ ಈತನಿಗೆ ಕೊಡಿಸಲಾಗಲಿಲ್ಲ. ಶಾಲೆಗೆ ಹೋದರೂ ಮಕ್ಕಳು 'ಕಳ್ಳನ ಮಗ' ಎನ್ನುವ ಅವಮಾನ ಎದುರಿಸ ಬೇಕಾಯಿತು. ಕೋರ್ಟ್ ಕೇಸ್ ಇದೆ ಎನ್ನುವ ಕಾರಣಕ್ಕಾಗಿ ಎಲ್ಲೂ ಉದ್ಯೋಗ ನನಗೆ ಸಿಗಲಿಲ್ಲ ಎನ್ನುವುದು ಉಮಾಕಾಂತ್ ಮಿಶ್ರಾನ ನೋವಿನ ಮಾತು.

ಸಂಸಾರದ ಜವಾಬ್ದಾರಿಯನ್ನು ಪತ್ನಿ ಮುನ್ನಡೆಸಲು ಹೊರಟರೂ ತನ್ನ ಮಕ್ಕಳಿಗಾದ ಅವಮಾನ ಆಕೆ ಕೂಡಾ ಅನುಭವಿಸ ಬೇಕಾಗಿ ಬಂತು ಎನ್ನುತ್ತಾರೆ ಉಮಾಕಾಂತ್ ಮಿಶ್ರಾ.

ಇದೆಲ್ಲದ್ದಕ್ಕಿಂತ ಸೋಜಿಗದ ಸಂಗತಿ ಏನಂದರೆ, 57 ರೂಪಾಯಿ ಈ ಕೇಸಿಗೆ 29 ವರ್ಷದಲ್ಲಿ 350 ಬಾರಿ ಈತ ವಿಚಾರಣೆಗಾಗಿ ಕೋರ್ಟ್ ಸುತ್ತಾಡಿದ್ದ ಎನ್ನುವುದು.

ಕೊನೆಗೂ ಕೋರ್ಟ್ ಈತನನ್ನು 'ನಿರಪರಾಧಿ' ಎಂದು ಘೋಷಿಸಿ ಈತನನ್ನು ಮುಕ್ತಗೊಳಿಸಿದೆ. ಆದರೆ ಈತ ಅನುಭವಿಸಿದ ನೋವು, ಯಾತನೆ, ಅವಮಾನ, ಕುಟುಂಬ ಅನುಭವಿಸಿದ ದುಮ್ಮಾನ ಲೆಕ್ಕಕ್ಕಿಲ್ಲವೇ?

ಅದಕ್ಕಿಂತ ಹೆಚ್ಚಾಗಿ ಮೂವತ್ತು ವರ್ಷ ತನ್ನ ಕುಟುಂಬದ ಜೊತೆ ಸಂತೋಷವಾಗಿರ ಬೇಕಾದ ಈತನ ಜೀವನವನ್ನು ಹಿಂದಿರುಗಿಸಲು ಯಾರಿಂದಾದರೂ ಸಾಧ್ಯವೇ?

ಈತನ ನೋವಿನ ಕಥೆ ಕಂಡು ಪ್ರಗತಿಪರ ಸಂಘಟನೆಗಳು ಮೂವತ್ತು ವರ್ಷದಲ್ಲಿ ಈತ ಮತ್ತು ಈತನ ಕುಟುಂಬ ಅನುಭವಿಸಿದ ನೋವಿಗೆ ಪರಿಹಾರ ನೀಡಲೇ ಬೇಕೆಂದು ಮತ್ತೆ ಕೋರ್ಟಿನಲ್ಲಿ ದೂರು ದಾಖಲಿಸಿವೆ.

ಈ ದೂರಿನ ವಿಚಾರಣೆ ಮತ್ತು ವಿಲೇವಾರಿಗೆ ಮತ್ತೆ ಮೂರು ದಶಕವಾಗದಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+