ಸರ್ದಾರ್ ಅಣೆಕಟ್ಟಿನ ಬಗೆಗಿನ 10 ವಿಶಿಷ್ಟ ವಿಚಾರ

Posted By:
Subscribe to Oneindia Kannada

ಅಹ್ಮದಾಬಾದ್, ಸೆಪ್ಟೆಂಬರ್ 13: ಅರ್ಧ ಶತಮಾನಕ್ಕೂ ಹೆಚ್ಚು ಕಾಲಾವಧಿಯಲ್ಲಿ ನಿರ್ಮಾಣವಾಗಿರುವ ಸರ್ದಾರ್ ಸರೋವರ್ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಸೆ. 17ರಂದು ಉದ್ಘಾಟಿಸಲಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದೇ ಈ ಮಹತ್ವದ ಅಣೆಕಟ್ಟನ್ನು ಅವರು ಉದ್ಘಾಟಿಸುತ್ತಿರುವುದು ವಿಶೇಷ.

1961ರಲ್ಲಿ ನರ್ಮದಾ ನದಿಗೆ ಅಡ್ಡವಾಗಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಕಟ್ಟಬೇಕೆಂಬ ಯೋಜನೆಗೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಶಿಲಾನ್ಯಾಸ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು.

ನರ್ಮದಾ ಅಣೆಕಟ್ಟು ಎತ್ತರ ಏರಿಕೆ, ಲಕ್ಷಾಂತರ ಮಂದಿಗೆ ಸಂಕಷ್ಟ

ಆಗ, ಶುರುವಾಗಿದ್ದ ಈ ಅಣೆಕಟ್ಟಿನ ಕಾಮಗಾರಿ ಈ ವರ್ಷ ಮುಕ್ತಾಯವಾಗಿದ್ದು ಇದೀಗ ಅಣೆಕಟ್ಟು ಉದ್ಘಾಟನೆಗೆ ಸಿದ್ಧಗೊಂಡಿದೆ.

ಸೆ. 17ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಅಣೆಕಟ್ಟಿನ 30 ಕ್ರೆಸ್ಟ್ ಗೇಟ್ ಗಳನ್ನು ಮೇಲೆತ್ತುವ ಮೂಲಕ ಪ್ರಧಾನಿ ಮೋದಿ ಈ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

(ಇಲ್ಲಿ ಬಳಸಲಾಗಿರುವ ಚಿತ್ರಗಳು ಸಾಂದರ್ಭಿಕ ನಿರೂಪಣೆಗಾಗಿ ಮಾತ್ರ)

163 ಮೀಟರ್ ಆಳವಿರುವ ಅಣೆಕಟ್ಟು

163 ಮೀಟರ್ ಆಳವಿರುವ ಅಣೆಕಟ್ಟು

ಈ ಅಣೆಕಟ್ಟು ನರ್ಮದಾ ಜಿಲ್ಲೆಯ ಕೆವಾದಿಯಾ ಪ್ರಾಂತ್ಯದಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು. 1.2 ಕಿ.ಮೀ. ಉದ್ದವಿರುವ ಈ ಅಣೆಕಟ್ಟು, 163 ಮೀಟರ್ ಆಳವಿದೆ.

ಹಾಕಿದ ಬಂಡವಾಳದ ಡಬಲ್ ವಾಪಸ್!

ಹಾಕಿದ ಬಂಡವಾಳದ ಡಬಲ್ ವಾಪಸ್!

ಈಗಾಗಲೇ ಇಲ್ಲಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ 4,141 ಕೋಟಿ ಯೂನಿಟ್ ಗಳಷ್ಟು ವಿದ್ಯುತ್ ಉತ್ಪಾದನೆಯಾಗಿದೆ. ಇದರಿಂದಾಗಿ, ಸುಮಾರು 16 ಸಾವಿರ ಕೋಟಿ ರು.ಗಳು ಸರ್ಕಾರಕ್ಕೆ ಸಂದಿದ್ದು, ಇದು ಅಣೆಕಟ್ಟು ನಿರ್ಮಾಣದ ಎರಡರಷ್ಟು ಮೊತ್ತವನ್ನು ದುಡಿದುಕೊಟ್ಟಂತಾಗಿದೆ.

ಮೂರು ರಾಜ್ಯಗಳಿಗೆ ವಿದ್ಯುತ್ ಹಂಚಿಕೆ

ಮೂರು ರಾಜ್ಯಗಳಿಗೆ ವಿದ್ಯುತ್ ಹಂಚಿಕೆ

ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಲ್ಲಿ ಗುಜರಾತ್ ಮಾತ್ರವಲ್ಲ ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳೂ ಪ್ರಯೋಜನ ಪಡೆಯಲಿವೆ. ಸರ್ದಾರ್ ಅಣೆಕಟ್ಟಿನಲ್ಲಿ ಒಟ್ಟಾರೆಯಾಗಿ ಉತ್ಪತ್ತಿಯಾಗುವ ವಿದ್ಯುತ್ ನಲ್ಲಿ ಶೇ. 27ರಷ್ಟು ಮಧ್ಯಪ್ರದೇಶಕ್ಕೆ, ಶೇ. 16ರಷ್ಟು ಗುಜರಾತ್ ಗೆ ಸಲ್ಲುತ್ತದೆ. ಮಹಾರಾಷ್ಟ್ರಕ್ಕೆ ಶೇ. 57ರಷ್ಟು ವಿದ್ಯುತ್ ಸರಬರಾಜು ಆಗುತ್ತದೆ.

ಕುಡಿಯಲು, ವ್ಯವಸಾಯಕ್ಕೆ ನೀರು

ಕುಡಿಯಲು, ವ್ಯವಸಾಯಕ್ಕೆ ನೀರು

ಈ ಅಣೆಕಟ್ಟಿನಿಂದ ಗುಜರಾತ್ ನ ಸುಮಾರು 18 ಲಕ್ಷ ಹೆಕ್ಟೇರ್ ನಷ್ಟು ಭೂಮಿ ನೀರಾವರಿಯಾಗಲಿದೆ. ಇದಲ್ಲದೆ, ಗುಜರಾತ್ ರಾಜ್ಯದ ಸುಮಾರು 9 ಸಾವಿರ ಹಳ್ಳಿಗಳಿಗೆ ಕಾಲುವೆಗಳ ಮೂಲಕ ಕುಡಿಯಲು ಹಾಗೂ ವ್ಯವಸಾಯಕ್ಕೆ ನೀರು ದೊರಕಲಿದೆ.

ಶೇ. 53ರಷ್ಟು ಗುಜರಾತ್ ಗೆ ಅನುಕೂಲ

ಶೇ. 53ರಷ್ಟು ಗುಜರಾತ್ ಗೆ ಅನುಕೂಲ

ಇದಿಷ್ಟೇ ಅಲ್ಲದೆ, ಗುಜರಾತ್ ನ 9,633 ಪುಟ್ಟ ಹಳ್ಳಿಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಸಿಗಲಿದೆ. ಈ ಚಿಕ್ಕ ಪುಟ್ಟ ಹಳ್ಳಿಗಳೇ ಗುಜರಾತ್ ನ ಭೂಭಾಗದ ಶೇ. 53ರಷ್ಟಿವೆ. ಹಾಗಾಗಿ, ಈ ಒಂದು ಯೋಜನೆ ಸುಮಾರು ಅರ್ಧದಷ್ಟು ಗುಜರಾತ್ ಗೆ ನೀರುಣಿಸುವ ಶಕ್ತಿ ಹೊಂದಿದೆ.

ಗುಡ್ಡಗಾಡು ಪ್ರದೇಶಗಳಿಗೆ ನೀರು

ಗುಡ್ಡಗಾಡು ಪ್ರದೇಶಗಳಿಗೆ ನೀರು

ಇದಲ್ಲದೆ, ರಾಜಸ್ತಾನದ ಬಾರ್ಮರ್ ಹಾಗೂ ಜಲೋರ್ ಎಂಬ ಎರಡು ಮರಳುಗಾಡಿನ ಹಳ್ಳಿಗಳ ಸುಮಾರು 2,46,000 ಹೆಕ್ಟೇರ್ ಪ್ರದೇಶಕ್ಕೆ ನೀರು ಸರಬರಾಜು ಮಾಡಲಿದೆ. ಅಲ್ಲದೆ, ಮಹಾರಾಷ್ಟ್ರದ 37,500 ಹೆಕ್ಟೇರ್ ಗುಡ್ಡಗಾಡು ಪ್ರದೇಶಗಳಿಗೆ ನೀರಿನ ಸೌಕರ್ಯ ಕಲ್ಪಿಸಲಿದೆ.

ನರ್ಮದಾ ಬಚಾವೋ ಆಂದೋಲನ

ನರ್ಮದಾ ಬಚಾವೋ ಆಂದೋಲನ

1961ರಲ್ಲೇ ಈ ಅಣೆಕಟ್ಟಿನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ ಇದರ ನಿರ್ಮಾಣ ಪೂರ್ತಿಯಾಗಲು ಸುಮಾರು 56 ವರ್ಷಗಳೇ ಸಂದಿವೆ. ಇದಕ್ಕೆ ಕಾರಣ, ಅಣೆಕಟ್ಟಿನ ನಿರ್ಮಾಣದಲ್ಲಿ ಆಗಾಗ ಉಂಟಾದ ಅಡಚಣೆ. ಈ ಅಡಚಣೆಗಳಲ್ಲಿ ಪ್ರಮುಖವಾದದ್ದು, ಖ್ಯಾತ ಸಮಾಜ ಸೇವಕಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ನಡೆದ ನರ್ಮದಾ ಬಚಾವೋ ಆಂದೋಲನ (ಎನ್ ಬಿಎ).

ಕಟ್ಟಾಜ್ಞೆಯೊಂದಿಗೆ ಹಸಿರು ನಿಶಾನೆ

ಕಟ್ಟಾಜ್ಞೆಯೊಂದಿಗೆ ಹಸಿರು ನಿಶಾನೆ

ಅಣೆಕಟ್ಟಿನಿಂದಾಗಿ ಮುಳುಗಡೆಗೊಂಡ ಹಳ್ಳಿಗರ ಜನರಿಗೆ ಹಾಗೂ ಹೊಲಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪುನರ್ವಸತಿ, ಪರಿಹಾರ ಸಿಗುವವರೆಗೂ ನರ್ಮದಾ ಅಣೆಕಟ್ಟಿನ ನಿರ್ಮಾಣವನ್ನು ಸ್ಥಗಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಹಾಗಾಗಿ, 1996ರಲ್ಲಿ ಈ ಅಣೆಕಟ್ಟಿನ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಆನಂತರ, 2000ರಲ್ಲಿ ನಿರಾಶ್ರಿತರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಕಟ್ಟಾಜ್ಞೆಯೊಂದಿಗೆ ಈ ಅಣೆಕಟ್ಟಿನ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ ನೀಡಿತು.

ಯುಪಿಎನಿಂದಲೂ ತೊಂದರೆ

ಯುಪಿಎನಿಂದಲೂ ತೊಂದರೆ

ಎನ್ ಬಿಎಯಿಂದಾಗಿ ಅಣೆಕಟ್ಟಿನ ನಿರ್ಮಾಣಕ್ಕೆ ಕೆಲಕಾಲ ತೊಂದರೆಯಾದರೆ, ಕೆಲವಾರು ಬಾರಿ ರಾಜಕೀಯ ಇಚ್ಛಾಶಕ್ತಿಯ ಕೊರೆತೆಯೂ ಅಣೆಕಟ್ಟೆಯ ನಿರ್ಮಾಣ ಮಂದಗತಿಗೆ ಸಾಗಲು ಕಾರಣವಾಯಿತು. ಉದಾಹರಣೆಗೆ, 2014ರಕ್ಕೂ ಮೊದಲೇ ಅಣೆಕಟ್ಟು ಸಿದ್ಧವಾಗಿದ್ದರೂ, ಅಣೆಕಟ್ಟಿಗೆ ಕ್ರೆಸ್ಟ್ ಗೇಟ್ ಅಳವಡಿಸಲು ಆಗಿನ ಯುಪಿಎ ಸರ್ಕಾರ ಸುಮಾರು 6 ವರ್ಷಗಳವರೆಗೆ ಅನುಮತಿ ನೀಡಿರಲಿಲ್ಲ. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ, ಕೇವಲ 17 ದಿನಗಳಲ್ಲಿ ಕ್ರೆಸ್ಟ್ ಗೇಟ್ ಅಳವಡಿಕೆಗೆ ಹಸಿರು ನಿಶಾನೆ ನೀಡಿದರು.

ಸಂಗ್ರಹ ಸಾಮರ್ಥ್ಯವೂ ಅಧಿಕ

ಸಂಗ್ರಹ ಸಾಮರ್ಥ್ಯವೂ ಅಧಿಕ

ಇದೇ ವರ್ಷ ಜೂನ್ ನಲ್ಲಿ ಈ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಗಳನ್ನು ಬಂದ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಣೆಕಟ್ಟೆಯ ಎತ್ತರವನ್ನು 138 ಮೀಟರ್ ಗಳಷ್ಟು ಹೆಚ್ಚಿಸಲಾಯಿತು. ಇದರಿಂದಾಗಿ, ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯ 1.27 ಮಿಲಿಯನ್ ಕ್ಯೂಬಿಕ್ ಮೀಟರ್ ಗಳಿಂದ 4.73 ಮಿಲಿಯನ್ ಕ್ಯೂಬಿಕ್ ಮೀಟರ್ ಗಳಿಗೆ ಹೆಚ್ಚಳವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fifty-six years after the foundation stone for the Sardar Sarovar Dam was laid by then Prime Minister Jawaharlal Nehru in Narmada district's Kevadia, the dam, one of India's biggest, will be finally inaugurated by Prime Minister Narendra Modi on September 17.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ