75 Rupee Coin: 75 ರೂಪಾಯಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ; ಹೇಗಿದೆ? ಏನಿದರ ವಿಶೇಷತೆ?
ಇಂದು (ಭಾನುವಾರ, ಮೇ 28) ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಹೊಸ ಸಂಸತ್ ಭವನ ಲೋಕಾರ್ಪಣೆ ಸ್ಮರಣಾರ್ಥವಾಗಿ ವಿಶೇಷ ಅಂಚೆ ಚೀಟಿ ಮತ್ತು 75 ರೂಪಾಯಿ ನಾಣ್ಯವನ್ನು ಬಿಡುಗಡೆಗೊಳಿಸಿದರು.
75 ರೂಪಾಯಿ ವಿಶೇಷ ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ ವ್ಯಾಸವನ್ನು ಹೊಂದಿದೆ. ಶೇ.50ರಷ್ಟು ಬೆಳ್ಳಿ, ಶೇ.40 ತಾಮ್ರ, ಶೇ.5ರಷ್ಟು ನಿಕಲ್ ಮತ್ತು ಶೇ.5ರಷ್ಟು ಸತುವನ್ನು ಬಳಸಿ ತಯಾರಿಸಲಾಗಿದೆ. ಒಟ್ಟು 35 ಗ್ರಾಂ ತೂಕವನ್ನು ಹೊಂದಿದೆ.

75 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆಯ ಚಿತ್ರವನ್ನು ಹೊಂದಿದೆ. ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ 'ಭಾರತ್' ಮತ್ತು ಇಂಗ್ಲಿಷ್‌ನಲ್ಲಿ 'ಇಂಡಿಯಾ' ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂಪಾಯಿ ಚಿಹ್ನೆಯನ್ನು ಸಹ ಹೊಂದಿದೆ.
ಈ ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ ಚಿತ್ರ ಮತ್ತು 2023ರ ಇಸವಿಯನ್ನು ಉಲ್ಲೇಖಿಸಲಾಗಿದೆ. ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ, ಇದು 75ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ನೂತನ ಸಂಸತ್ ಭವನ ಉದ್ಘಾಟನೆ ನಂತರ, ಲೋಕಸಭೆಯಲ್ಲಿ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನೂತನ ಸಂಸತ್ ಭವನ ಭಾರತದ ವೈವಿದ್ಯತೆಯ ಸಂಸ್ಕೃತಿ, ಭಾರತದ ಪ್ರಜಾಪ್ರಭುತ್ವದ ಪ್ರತಿಬಿಂಬವಾಗಿದೆ," ಎಂದರು.

ಭವ್ಯ ಭಾರತ ಆಧುನಿಕ ಮೂಲಸೌಕರ್ಯದ ಭಾರತವಾಗಿದೆ. ಹೊಸ ಸಂಸತ್ ಭವನದಲ್ಲಿ ಸೂರ್ಯನ ಕಿರಣ ನೇರವಾಗಿ ಒಳ ಪ್ರವೇಶಿಸುತ್ತದೆ. ಇದರಿಂದ ವಿದ್ಯುತ್ ಉಪಯೋಗ ಕಡಿಮೆ. ಅತ್ಯಾಧುನಿಕ ಗೆಜೆಟ್ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.
"ಬೆಳಗ್ಗೆ ನೂತನ ಸಂಸತ್ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಭೇಟಿಯಾಗಿ ಮಾತನಾಡಿದೆ. ಸರಿಸುಮಾರು 8,000 ಕಾರ್ಮಿಕರಿಗೆ ಉದ್ಯೋಗ ಸಿಕ್ಕಿದೆ. ಇದೇ ಸಂಸತ್ತಿನಲ್ಲಿ ಅವರ ಫೋಟೋ ಗ್ಯಾಲರಿ ಮಾಡಿ ಇಡುತ್ತೇವೆ. ಭಾರತ ಅತೀ ದೊಡ್ಡ ದೇಶ, ಇಲ್ಲಿನ ವ್ಯವಸ್ಥೆ, ಚುನಾವಣೆ, ಸಂಸ್ಕೃತಿ ಎಲ್ಲವೂ ಇತರ ದೇಶಗಳಿಗೆ ಮಾದರಿಯಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
"ನಮ್ಮ ಅಭಿವೃದ್ಧಿ ನಡೆ ಇತರ ದೇಶಗಳಿಗೆ ಪ್ರೇರಣೆಯಾಗಲಿದೆ. ಯಶಸ್ಸಿನ ಮೊದಲ ಮೆಟ್ಟಿಲಿನ ವಿಶ್ವಾಸವಾಗಿದೆ. ಹೊಸ ಸಂಸತ್ ಭವನ ಹೊಸ ಭಾರತ ನಿರ್ಮಾಣದಲ್ಲಿ ಪ್ರೇರಣೆ ನೀಡಲಿದೆ. ಪ್ರತಿಯೊಬ್ಬರ ಭಾರತೀಯ ಕರ್ತವ್ಯವನ್ನು ಜಾಗೃತಿಗೊಳಿಸಲಿದೆ. ಹೊಸ ಪ್ರೇರಣೆಯೊಂದಿಗೆ ಪ್ರಜಾಪ್ರಭುತ್ವಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನಕ್ಕೆ ಬುನಾದಿಯಾಗಿದೆ," ಎಂದು ಪ್ರಧಾನಿ ನುಡಿದರು.

2020ರ ಡಿ.10ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1200 ಕೋಟಿ ರೂಪಾಯಿ ವೆಚ್ಚದಲ್ಲಿ 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ.
888 ಲೋಕಸಭೆ ಸಂಸದರು ಹಾಗೂ 300 ಆಸನಗಳ ರಾಜ್ಯಸಭೆ ಸಭಾಂಗಣಗಳಿದ್ದು, ಒಟ್ಟು 1272 ಆಸನ ಸಾಮರ್ಥ್ಯವನ್ನು ಇದು ಹೊಂದಿದೆ. ಲೋಕಸಭೆಯನ್ನು ಗರಿಬಿಚ್ಚಿರುವ ನವಿಲಿನ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ.












Click it and Unblock the Notifications