ಮೋದಿಗೆ ಬರೀ ಬಟ್ಟೆ ಬದಲಾಯಿಸುವ ಶೋಕಿ: ರಾಹುಲ್ ವಾಗ್ದಾಳಿ
ಪಾಟ್ನಾ, ಅ 8 (ಪಿಟಿಐ) : ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿಗೆ ಬರೀ ವಿದೇಶ ಪ್ರವಾಸದ ಚಿಂತೆ.
ಕಳೆದ ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಹದಿನಾರು ಬಾರಿ ಬಟ್ಟೆ ಬದಲಾಯಿಸಿದ್ದಾರೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಹಾರದಲ್ಲಿ ಲೆಕ್ಕ ಹೇಳಿದ್ದಾರೆ.
ಬಿಹಾರದ ಬೇಗುಸರಾಯ್ ಮತ್ತು ಶೇಖ್ಪುರದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಬುಧವಾರ (ಅ 7) ಮಾತನಾಡುತ್ತಿದ್ದ ರಾಹುಲ್, ಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ವಿದೇಶ ಪ್ರವಾಸ ಹಾಗೂ ಆ ವೇಳೆ ತಾನು ತೊಡುವ ಬಟ್ಟೆಯ ಬಗ್ಗೆಯೇ ಯೋಚಿಸುವ 'ಶೋಕಿ' ಅವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿಯ ಮಾತನ್ನು ನಂಬಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ ರಾಹುಲ್, ಮೋದಿ ಓರ್ವ ಸುಳ್ಳುಗಾರ. ಆಶ್ವಾಸನೆಗಳನ್ನು ನೀಡುವುದರಲ್ಲಿ ನಿಸ್ಸೀಮರು, ಮಾತಿನಿಂದಲೇ ಜನರನ್ನು ತಮ್ಮತ್ತ ಸೆಳೆಯುವ ಶಕ್ತಿ ಹೊಂದಿದ್ದಾರೆಂದು ರಾಹುಲ್ ಟೀಕಿಸಿದ್ದಾರೆ. (ಬಿಹಾರ ಸಮೀಕ್ಷೆ: ಜಯದತ್ತ ಬಿಜೆಪಿ)
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನೋಡಿ ಮೋದಿ ಕಲಿಯಲಿ. ಸದಾ ಶ್ವೇತ ಉಡುಪಿನಲ್ಲಿರುವ ನಿತೀಶ್, ಆಡಂಬರದ ಬಟ್ಟೆ ಧರಿಸಿದ್ದನ್ನು ನಾನು ನೋಡಲೇ ಇಲ್ಲ.
ಮೋದಿ ಅಧಿಕಾರಕ್ಕೆ ಬಂದ ನಂತರ ಅವರ ಸರಕಾರವನ್ನು ಸೂಟುಬೂಟಿನ ಸರಕಾರ ಎಂದು ನಾನು ಟೀಕಿಸಿದ್ದೆ. ಅಂದಿನಿಂದ ಅವರು ಸೂಟನ್ನು ಧರಿಸುತ್ತಿಲ್ಲ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ಬಡವರ ಜೊತೆ ಮೋದಿ ಸೆಲ್ಫಿ
ಬಡ ಕಾರ್ಮಿಕರ ಅಥವಾ ರೈತರ ಜೊತೆಗೆ ಮೋದಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ನೀವು ನೋಡಿದ್ದೀರಾ? ಬಡವರು ಬುದ್ಧಿವಂತರಲ್ಲ ಎನ್ನುವ ಭಾವನೆ ನಮ್ಮ ಪ್ರಧಾನಿಗೆ ಇದೆ - ರಾಹುಲ್ ಗಾಂಧಿ. (ಚಿತ್ರ:ಪಿಟಿಐ)

ಮೋದಿಗೆ ಬಟ್ಟೆಗಳ ಶೋಕಿ
ಮೋದಿಗೆ ಬಣ್ಣದ, ಬಟ್ಟೆಗಳ ಶೋಕಿ ಜಾಸ್ತಿ. ಅವರ ಸುತ್ತ ಕಾರ್ಪೋರೇಟ್ ದಿಗ್ಗಜರೇ ಇರುವುದನ್ನು ಮಾತ್ರ ನೀವು ನೋಡಿದ್ದೀರಿ. ರೈತರ ಜೊತೆ ಇರುವುದನ್ನು ನೋಡಿಲ್ಲ. ತನ್ನ ಡ್ರೆಸ್ ಕೋಡಿನ ಬಗ್ಗೆ ಮೋದಿಗೆ ಶೋಕಿ ಜಾಸ್ತಿ. (ಚಿತ್ರ:ಪಿಟಿಐ)

ಹದಿನೈದು ಲಕ್ಷ ಎಲ್ಲಿ
ಅಧಿಕಾರಕ್ಕೆ ಬರುವ ಸಲುವಾಗಿ ಸುಳ್ಳನ್ನು ಹೇಳಿದ ಮೋದಿ ಈಗ ಜನತೆಗೆ ಉತ್ತರಿಸಲಿ. ಕಪ್ಪುಹಣ ವಾಪಸ್ ತಂದು, ಪ್ರತೀ ಭಾರತೀಯನ ಅಕೌಂಟಿಗೆ ಹದಿನೈದು ಲಕ್ಷ ಜಮಾ ಮಾಡುತ್ತೇನೆ ಎಂದ ಅವರ ಭರವಸೆಯ ಕಥೆ ಏನಾಯಿತು ಎಂದು ರಾಹುಲ್, ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಮೋದಿ ಸುತ್ತ ಸಿಇಒಗಳು
ಪ್ರಧಾನಿ ಮೋದಿ ಮೊದಲು ಒಂದು ಬಣ್ಣದ ಉಡುಪು ಧರಿಸುತ್ತಾರೆ. ಅದಾದ ನಂತರ, ನೀಲಿ, ಹಳದಿ, ಹಸಿರು ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. ಮೋದಿ ಸುತ್ತ ಗೂಗಲ್, ಫೇಸ್ ಬುಕ್, ಆಪಲ್ ಹೀಗೆ ದೊಡ್ಡ ಕಂಪೆನಿಯ ಸಿಇಒಗಳು ಇರುತ್ತಾರೆಯೇ ಹೊರತು ಬಡ ರೈತರಲ್ಲ - ರಾಹುಲ್ ಗಾಂಧಿ (ಚಿತ್ರ:ಪಿಟಿಐ)












Click it and Unblock the Notifications