ಕೊವಿಡ್-19 ಲಸಿಕೆ ಸಂಶೋಧನಾ ತಂಡಗಳೊಂದಿಗೆ ಪ್ರಧಾನಿ ಚರ್ಚೆ
ನವದೆಹಲಿ, ನವೆಂಬರ್.29: ಕೊರೊನಾವೈರಸ್ ಲಸಿಕೆ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗದಲ್ಲಿ ತೊಡಗಿರುವ ಮೂರು ತಂಡಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.
"ನವೆಂಬರ್.30ರ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊವಿಡ್-19 ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಜಿನೆವಾ ಬಯೋಫಾರ್ಮಾ, ಬಯೋಲಾಜಿಕಲ್-ಇ ಮತ್ತು ಡಾ. ರೆಡ್ಡಿಸ್ ತಂಡಗಳ ಜೊತೆಗೆ ಸಮಾಲೋಚನೆ ನಡೆಸಲಾಗುತ್ತದೆ" ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ
ಶನಿವಾರವಷ್ಟೇ ಭಾರತದ ಪ್ರಮುಖ ಮೂರು ಕೊರೊನಾವೈರಸ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ 16 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ಈ ಸಂಖ್ಯೆಯು ಸ್ಪೇನ್, ಇಟಲಿ ಮತ್ತು ಇಂಗ್ಲೆಂಡ್ ರಾಷ್ಟ್ರಗಳನ್ನೇ ಮೀರಿಸುವಂತಿದೆ.
ಮೂರು ನಗರ ಕಾರ್ಖಾನೆಗಳಿಗೆ ಪ್ರಧಾನಿ ಭೇಟಿ:
ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಮೂರು ನಗರಗಳ ಪ್ರಮುಖ ಕಾರ್ಖಾನೆಗಳಿಗೆ ನವೆಂಬರ್.28ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಅಹ್ಮದಾಬಾದ್ ನಲ್ಲಿರುವ ಜಿಡಸ್ ಕ್ಯಾಡಿಲಾ ಫೆಸಿಲಿಟಿ, ಹೈದ್ರಾಬಾದ್ ನಲ್ಲಿರುವ ಭಾರತ್ ಬಯೋಟೆಕ್ ಫೆಸಿಲಿಟಿ ಮತ್ತು ಪುಣೆಯಲ್ಲಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೊರೊನಾವೈರಸ್ ಲಸಿಕೆಗೆ ಎಷ್ಟು ಬೆಲೆ?
ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ (25-37 ಡಾಲರ್) ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿತರಿಗೆ ಪಿ-ಫಿಜರ್ ಕಂಪನಿಯ ಲಸಿಕೆಯ ಒಂದು ಡೋಸ್ ಗೆ 1447 ರೂಪಾಯಿ(19.50 ಡಾಲರ್ ) ದರ ನಿಗದಿಗೊಳಿಸಲಾಗಿದೆ. ಒಬ್ಬ ಕೊವಿಡ್-19 ಸೋಂಕಿತನಿಗೆ ಕನಿಷ್ಠ 2 ಡೋಸ್ ಲಸಿಕೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಪಿ-ಫಿಜರ್ ಕಂಪನಿಯ ಲಸಿಕೆ ಪಡೆದುಕೊಳ್ಳಲು ಕನಿಷ್ಠ 3708 ರೂಪಾಯಿ (50 ಡಾಲರ್) ವೆಚ್ಚವಾಗಲಿದೆ ಎಂದು ಈವರೆಗಿನ ಮಾಹಿತಿ ಪ್ರಕಾರ ಗೊತ್ತಾಗಿದೆ.