ರೈತರಲ್ಲಿ ಒಡಕು ಮೂಡಿಸುವ ಪ್ರಧಾನಿ ಪ್ರಯತ್ನ ಯಶಸ್ವಿಯಾಗದು: ರಾಕೇಶ್ ಟಿಕಾಯತ್
ನವದೆಹಲಿ, ನವೆಂಬರ್ 23: ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟವನ್ನು ಮುಂದುವರಿಸುವ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಪುನರ್ ಉಚ್ಛರಿಸಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ನಡುವೆ ಒಡಕು ಮೂಡಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ನೋದ ಕಿಸಾನ್ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, "ನೀವು ಜಾರಿಗೊಳಿಸಿದ ಕಾನೂನುಗಳು ಬಡ ರೈತರು, ಕಾರ್ಮಿಕರು ಮತ್ತು ಇತರರಿಗೆ ಒಳಿತಲ್ಲ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಒಂದು ವರ್ಷ ತೆಗೆದುಕೊಂಡಿದ್ದೀರಿ," ಎಂದರು. ಲಕ್ನೋದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿದ ಮಹಾಪಂಚಾಯತ್ ಸಭೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಸಹ ಹಾಜರಾಗಿದ್ದರು.
Explained: ಕೃಷಿ ಕಾಯ್ದೆ ರದ್ದುಗೊಳಿಸಿದ ಪ್ರಧಾನಿಗೆ ರೈತರ 6 ಬೇಡಿಕೆಗಳ ಪತ್ರ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣವನ್ನು ಉಲ್ಲೇಖಿಸಿ ರಾಕೇಶ್ ಟಿಕಾಯತ್ ಮಾತನಾಡಿದರು. "ನಾವು ನಮ್ಮ ಭಾಷೆಯಲ್ಲಿ ವಿಷಯಗಳನ್ನು ಹೇಳಿದ್ದೇವೆ, ಆದರೆ ದೆಹಲಿಯ ಬಂಗಲೆಗಳಲ್ಲಿ ಕುಳಿತಿರುವವರಿಗೆ ಬೇರೆ ಭಾಷೆ ಇತ್ತು. ಅವರು ಕಾನೂನನ್ನು ಹಿಂಪಡೆಯಲು ನಿರ್ಧರಿಸಿದರು. ಆದರೆ ಕೆಲವು ಜನರು ಕಾಯ್ದೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವ ಮೂಲಕ ರೈತರ ಮಧ್ಯೆಯೇ ಒಡಕು ಮೂಡಿಸಲು ಪ್ರಯತ್ನಿಸಿದರು," ಎಂದು ಕಿಸಾನ್ ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್ ದೂಷಿಸಿದ್ದಾರೆ.

ಕೇಂದ್ರ ಸರ್ಕಾರದ ಇನ್ನೂ ಹಲವು ಬೇಡಿಕೆಗಳ ಬಗ್ಗೆ ಗಮನಿಸಬೇಕು
ಕೇಂದ್ರ ಸರ್ಕಾರ ಇನ್ನೂ ಅನೇಕ ರೈತರ ಸಮಸ್ಯೆಗಳನ್ನು ಗಮನಿಸಬೇಕಾಗಿದೆ ಎಂದಿರುವ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್, ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತರಿಪಡಿಸುವ ಕಾನೂನಿನ ಬೇಡಿಕೆಯನ್ನು ಸೂಚಿಸಿದರು. "ನಮ್ಮ ಹೋರಾಟ ಮುಂದುವರಿಯುತ್ತದೆ, ಏಕೆಂದರೆ ನಮ್ಮ ಸಮಸ್ಯೆಗಳು ಮೂರು ಕೃಷಿ ಕಾನೂನುಗಳ ರದ್ದತಿಗೆ ಸೀಮಿತವಾಗಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ನಮ್ಮೊಂದಿಗೆ ಮಾತನಾಡಬೇಕು. ನಾವು ಎಲ್ಲಿಯೂ ಹೋಗುತ್ತಿಲ್ಲ. ದೇಶದೆಲ್ಲೆಡೆ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.

ಎಂಎಸ್‌ಪಿ ಖಾತರಿಪಡಿಸುವ ಕಾಯ್ದೆ ಅಗತ್ಯ ಎಂದ ಟಿಕಾಯತ್
ಕಳೆದ 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಬೆಂಬಲಿಸಿದ್ದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಬೇಡಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನು ಅಗತ್ಯವಿದೆ ಎಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್‌ಗೆ ಸೂಚಿಸಿದ ಸಮಿತಿಯಲ್ಲಿ ನರೇಂದ್ರ ಮೋದಿ ಕೂಡಾ ಇದ್ದರು. ಈ ಸಮಿತಿಯ ವರದಿಯು ಪ್ರಧಾನಮಂತ್ರಿ ಕಚೇರಿಯಲ್ಲಿದೆ. ಹೊಸ ಸಮಿತಿಯ ಅಗತ್ಯವಿಲ್ಲ, ನಿಮ್ಮದೇ ಆದ ಸಮಿತಿಯ ವರದಿಯನ್ನೇ ನೀವು ಅನುಷ್ಠಾನಗೊಳಿಸುತ್ತೀರಿ ಅಲ್ಲವೇ," ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.

ಲಖೀಂಪುರ್ ಖೇರಿ ಘಟನೆ ಬಗ್ಗೆ ಉಲ್ಲೇಖಿಸಿದ ಟಿಕಾಯತ್
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರನನ್ನು ಬಂಧಿಸಲಾಗಿದೆ. ಇದರ ಜೊತೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕೆಂಬ ಬೇಡಿಕೆಯನ್ನು ರಾಕೇಶ್ ಟಿಕಾಯತ್ ಪುನರುಚ್ಚರಿಸಿದರು.
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಒಂದು ವಾಹನ ಸೇರಿದಂತೆ ಮೂರು ವಾಹನಗಳ ಬೆಂಗಾವಲು ಡಿಕ್ಕಿ ಹೊಡೆದು ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದರು. "ಲಖಿಂಪುರ ಖೇರಿ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಸೆಕ್ಷನ್ 120 ಬಿ ಆರೋಪಿ ಅಜಯ್ ಮಿಶ್ರಾ ಟೆನಿ ಇನ್ನೂ ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ನಿಮ್ಮ ಸಂಪುಟದಲ್ಲೇ ಸಚಿವರಾಗಿಯೂ ಉಳಿದಿದ್ದಾರೆ. ಅವರು ನಿಮ್ಮೊಂದಿಗೆ ಮತ್ತು ಇತರ ಹಿರಿಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ವಜಾಗೊಳಿಸಬೇಕು ಮತ್ತು ಬಂಧಿಸಬೇಕು," ಎಂದು ರೈತರು ಈ ಹಿಂದೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲೂ ಉಲ್ಲೇಖಿಸಿದ್ದರು.

ಮೂರು ವಿವಾದಿತ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಇದೀಗ ಸಮ್ಮತಿ ಸೂಚಿಸಿದೆ.