ಪ್ರಧಾನಿ ಮೋದಿ ಕೈಮಗ್ಗ ವಿಡಿಯೋಗೆ ‘ಪ್ರೈಮ್ ಇನ್‌ಫ್ಲುಯೆನ್ಸರ್’ ಎಂದ ಅಭಿಜೀತ್ ದಿಪ್ಕೆ: ಯುವಕರ ಪರ ಮಾತನಾಡಲು ಆಗ್ರಹ
ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಚಾಲನೆ ನೀಡಿದ್ದು, ಯುವಜನತೆಯನ್ನ ಆಕರ್ಷಿಸುವ ವಿಶೇಷ ವಿಡಿಯೋ ಒಂದನ್ನಾ ಹಂಚಿಕೊಂಡಿದ್ದಾರೆ. ಆದರೆ ಪ್ರಧಾನಿಯವರ ಈ ಇನ್‌ಸ್ಟಾಗ್ರಾಮ್ ರೀಲ್ ಕುರಿತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಪ್ರತಿಕ್ರಿಯಿಸಿದ್ದು,'ಪ್ರೈಮ್ ಇನ್‌ಫ್ಲುಯೆನ್ಸರ್' ಎಂದು ಕಮೆಂಟ್ ಮಾಡಿದ್ದಲ್ಲದೆ, ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶದ ಯುವಕರ ಸಮಸ್ಯೆಗಳ ಕುರಿತು ಮಾತನಾಡುವಂತೆ ಆಗ್ರಹಿಸಿದ್ದಾರೆ.
ಕೈಮಗ್ಗ ಉತ್ಪನ್ನಗಳ GRWM ವಿಡಿಯೋಗೆ ಪ್ರಧಾನಿ ಮೋದಿ ಕರೆ
ನಿನ್ನೆ ಅಂದರೆ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಯಲ್ಲಿ ರೀಲ್ ಮಾಡಿ ಒಂದು ಮಹತ್ವದ ಸಂದೇಶವನ್ನ ಹಂಚಿಕೊಂಡಿದ್ದರು. "ಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನವಾಗಿದೆ. ಭಾರತದ ಕೈಮಗ್ಗದ ವೈವಿಧ್ಯತೆಯನ್ನ ಜನಪ್ರಿಯಗೊಳಿಸೋಣ. ನಿಮ್ಮ ನೆಚ್ಚಿನ ಕೈಮಗ್ಗದ ಉಡುಪುಗಳೊಂದಿಗೆ 'ಗೆಟ್ ರೆಡಿ ವಿತ್ ಮಿ' (GRWM) ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಮತ್ತು ಅದರ ಜೊತೆಗೆ #NationalHandloomDay ಹ್ಯಾಶ್‌ಟ್ಯಾಗ್ ಬಳಸಲು ಮರೆಯಬೇಡಿ" ಎಂದು ಕರೆ ನೀಡಿದ್ದರು.

ಅವರ ಬಳಿಯಿದ್ದ ಚೆಂದದ ಕೈಮಗ್ಗದ ಬಟ್ಟೆಗಳನ್ನು ಪ್ರದರ್ಶಿಸುತ್ತಾ ವೀಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಸ್ನೇಹಿತರೇ, ನಾವು 1905ರ ಆಗಸ್ಟ್ 7 ರಂದು ಆರಂಭವಾದ ಸ್ವದೇಶಿ ಚಳವಳಿಯನ್ನ ಮರೆಯಬಾರದು. ಸ್ನೇಹಿತರ ದಿನಾಚರಣೆಯನ್ನ ಆಚರಿಸುವಷ್ಟೇ ಉತ್ಸಾಹದಿಂದ ರಾಷ್ಟ್ರೀಯ ಕೈಮಗ್ಗ ದಿನವನ್ನೂ ಆಚರಿಸಬೇಕು" ಎಂದರು.
Tomorrow, 7th August is National Handloom Day. Let’s make India’s handloom diversity popular.
— Narendra Modi (@narendramodi) August 6, 2026
Share your videos with your favourite handloom products, including GRWM videos on social media.
Don’t forget to use #NationalHandloomDay. pic.twitter.com/zoFdTXphRL
"ಕೈಮಗ್ಗ ದಿನವನ್ನು ಆಚರಿಸುವುದೆಂದರೆ, ತಮ್ಮ ಸಣ್ಣ ಮನೆಗಳಲ್ಲಿ ಮಗ್ಗಗಳ ಮೂಲಕ ಕೈಗಳಿಂದ ಬಟ್ಟೆಗಳನ್ನ ನೇಯುವ ಪ್ರತಿ ಬಡ ಕುಟುಂಬ ಹಾಗೂ ನೇಕಾರರ ಕುಟುಂಬಕ್ಕೆ ಬೆಂಬಲ ನೀಡಿದಂತೆ. ಭಾರತವನ್ನು ಆತ್ಮನಿರ್ಭರ ಭಾರತವನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಕಟ್ಟಕಡೆಯ ಹಾಗೂ ಬಡ ಕುಟುಂಬಗಳೂ ಆರ್ಥಿಕವಾಗಿ ಸಬಲರಾಗಬೇಕು" ಎಂದು ಅವರು ತಿಳಿಸಿದರು.
'ಪ್ರೈಮ್ ಇನ್‌ಫ್ಲುಯೆನ್ಸರ್' ಎಂದು ಕಾಲೆಳೆದ ಅಭಿಜೀತ್ ದಿಪ್ಕೆ
ಪ್ರಧಾನಿ ಮೋದಿಯವರ ಈ ಇನ್‌ಸ್ಟಾಗ್ರಾಮ್ ರೀಲ್‌ಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅವುಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಕಮೆಂಟ್ ಮಾತ್ರ ಎಲ್ಲರ ಗಮನ ಸೆಳೆದಿದೆ.
ಭಾರತದ ಕೈಮಗ್ಗ ಉತ್ಪನ್ನಗಳನ್ನ ಪ್ರೋತ್ಸಾಹಿಸುವಂತೆ ಮತ್ತು ವಿಡಿಯೋಗಳನ್ನ ಮಾಡುವಂತೆ ಯುವಜನರಿಗೆ ಕರೆ ನೀಡಿದ ಪ್ರಧಾನಿಯವರ ಪೋಸ್ಟ್ ಕೆಳಗೆ ದಿಪ್ಕೆ ಅವರು "ಪ್ರೈಮ್ ಇನ್‌ಫ್ಲುಯೆನ್ಸರ್" ಎಂದು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಯುವಕರ ಸಮಸ್ಯೆಗಳ ಕುರಿತು ಮಾತನಾಡಲು ಒತ್ತಾಯ
ಇನ್‌ಸ್ಟಾಗ್ರಾಮ್‌ನಲ್ಲಿ ಕಮೆಂಟ್ ಮಾಡಿದ ಕೆಲವೇ ಗಂಟೆಗಳ ಬಳಿಕ, ಅಭಿಜೀತ್ ದಿಪ್ಕೆ ಅವರು ಪ್ರತ್ಯೇಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಲ್ಲಿ ಮಾಡುವ ಭಾಷಣದಲ್ಲಿ ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡಬೇಕು ಹಾಗೂ ಯುವಜನತೆಗಾಗಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ದಿಪ್ಕೆ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ದಿಪ್ಕೆ ನೇತೃತ್ವದ ಸಿಜೆಪಿ ಪಾರ್ಟಿ ದೇಶಾದ್ಯಂತ 'ಕ್ಯಾ ಬೋಲ್ತಿ ಪಬ್ಲಿಕ್' ಎಂಬ ಅಭಿಯಾನವನ್ನು ಘೋಷಿಸಿತ್ತು. ಶಾಲೆ, ಕಾಲೇಜು ಹಾಗೂ ಕೋಚಿಂಗ್ ಸೆಂಟರ್‌ಗಳ ಶುಲ್ಕಗಳು ವಿಪರೀತವಾಗಿ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಹೀಗಾಗಿ ಶಿಕ್ಷಣ ಕ್ಷೇತ್ರ ಸುಧಾರಣೆಯೇ ತಮ್ಮ ಮೊದಲ ಆದ್ಯತೆ ಎಂದು ದಿಪ್ಕೆ ತಿಳಿಸಿದ್ದಾರೆ.
ದೇಶದ ನೇಕಾರರನ್ನು ಬೆಂಬಲಿಸುವ ಹಾಗೂ ಗ್ರಾಮೀಣ ಜೀವನೋಪಾಯವನ್ನು ಉತ್ತೇಜಿಸುವ ಉದ್ದೇಶದಿಂದ, 1905ರ ಸ್ವದೇಶಿ ಚಳವಳಿಯ ಆರಂಭದ ಸವಿನೆನಪಿಗಾಗಿ 2015ರಿಂದ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.


Click it and Unblock the Notifications
