ಗಾಂಧಿ ಜನಿಸಿದ ನಾಡಿನಲ್ಲಿ ಹುಟ್ಟಿದ 'ಮೋದಿ' ಜೊತೆ ಸಿದ್ದು ಪಯಣ
ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟು ಶಬ್ದದಿಂದ ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಯ ಬೆಂಗಳೂರು ಭೇಟಿಯ (ಅ 6) ಸಂದರ್ಭದಲ್ಲಿ ನಸುನಗುತ್ತಲೇ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು.
ಮೊನ್ನೆ ಮೊನ್ನೆ ಅಕ್ಟೋಬರ್ ಎರಡು ಗಾಂಧಿ ಜಯಂತಿಯ ದಿನದಂದು ಮಹಾತ್ಮಾ ಗಾಂಧಿ ಹುಟ್ಟಿದ ನಾಡಿನಲ್ಲಿ ಮೋದಿಯಂಥವರು ಹುಟ್ಟಿದ್ದು ವಿಪರ್ಯಾಸ ಎನ್ನುವ ವಿವಾದಕಾರಿ ಹೇಳಿಕೆಯನ್ನು ಸಿಎಂ ಸಿದ್ದು ನೀಡಿದ್ದರು.
ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳುವುದು ಶಿಷ್ಟಾಚಾರವಾದರೂ, ಏರ್ ಪೋರ್ಟಿನಿಂದ ಬಾಷ್ ಕಂಪೆನಿಗೆ ಪ್ರಧಾನಿ ಕಾರಿನಲ್ಲೇ ಸಿದ್ದು ಪ್ರಯಾಣಿಸಿದ್ದು ಹಲವರು ಹುಬ್ಭೇರುವಂತೆ ಮಾಡಿತ್ತು.
ತಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಮೈಸೂರು ಪೇಟಾ, ಹೂಗುಚ್ಛದೊಂದಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಧಾನಿ ಮೋದಿ ಅವರು ಸಹ ತಮ್ಮ ಎಂದಿನ ಹಸನ್ಮುಖದಿಂದಲೇ ಮಾತನಾಡಿಸಿ ಜತೆಗೆ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.
ಸರಕಾರೀ ಕಾರ್ಯಕ್ರಮಕ್ಕೆ ಪ್ರಧಾನಿಗಳು ರಾಜ್ಯಕ್ಕೆ ಬಂದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಳ್ಳುವ ಶಿಷ್ಟಾಚಾರವನ್ನು ಚಾಚೂ ತಪ್ಪದೇ ಸಿದ್ದರಾಮಯ್ಯ ತಮ್ಮ ಎರಡೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಮುಂದೆ ಓದಿ..

ರಾಹುಲ್ ಭೇಟಿಯನ್ನೂ ಮುಂದಕ್ಕೆ ಹಾಕಲಾಗಿತ್ತು
ಅಕ್ಟೋಬರ್ ಐದು ಮತ್ತು ಆರರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬವನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು. ಆದರೆ ಮೋದಿ ಮತ್ತು ಜರ್ಮನಿ ಚಾನ್ಸಲರ್ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಕಾರಣಕ್ಕಾಗಿ ರಾಹುಲ್ ಪ್ರವಾಸವನ್ನು ಮುಂದಕ್ಕೆ ಹಾಕಲಾಗಿತ್ತು.

ನ್ಯಾಸ್ಕಾಂ ಸಭೆಗೆ ಸಿದ್ದುಗೆ ಆಹ್ವಾನವಿರಲಿಲ್ಲ
ಬೆಂಗಳೂರಿನ Leela Palace ನಲ್ಲಿ ನಡೆದ ನ್ಯಾಸ್ಕಾಂ ಸಭೆಗೆ (ಅ 6) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಿರಲಿಲ್ಲ. ವೇದಿಕೆಯಲ್ಲಿ ಪ್ರಧಾನಿ ಮತ್ತು ಜರ್ಮನ್ ಚಾನ್ಸಲರ್ ಮಾತ್ರ ಇದ್ದರು. ಮುಂದಿನ ಸಾಲಿನಲ್ಲಿ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಮಾತ್ರ ಹಾಜರಿದ್ದರು. ಸಿಎಂ ಆಗಲಿ ಅಥವಾ ರಾಜ್ಯದ ಯಾವುದೇ ಸಚಿವರು ಹಾಜರಿರಲಿಲ್ಲ. ನ್ಯಾಸ್ಕಾಂ ಸಿದ್ದರಾಮಯ್ಯನವರನ್ನು ಸಭೆಗೆ ಆಹ್ವಾನಿಸರಲಿಲ್ಲ.

ಎಸ್ಕಾರ್ಟ್ ವಾಹನ ಬಿಡಲಿಲ್ಲ
ಬಾಷ್ ಆಡುಗೋಡಿ ಘಟಕಕ್ಕೆ ಪ್ರಧಾನಿ ಜೊತೆ ಸಿದ್ದು ತೆರಳಿದ್ದರು. ಆದರೆ ಬಾಷ್ ಸಂಸ್ಥೆಯ ಕೋರಮಂಗಲದ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಎಸ್ಕಾರ್ಟ್ ವಾಹನಗಳಿಗೆ ಪ್ರಧಾನಿಯವರ ಎಸ್ಪಿಜಿ ಪಡೆ ಒಳಗೆ ಹೋಗಲು ಅವಕಾಶ ನೀಡದೇ ಸಿದ್ದು ಅವರ ಕಾರಿಗೆ ಮಾತ್ರ ಒಳಗೆ ಹೋಗಲು ಅನುಮತಿ ನೀಡಿತ್ತು.

ಮಂದಸ್ಮಿತರಾಗಿದ್ದ ಪ್ರಧಾನಿ ಮೋದಿ
ಹೊಸೂರು ರಸ್ತೆಯ ಬಾಷ್ ಕಂಪನಿಯಲ್ಲಿ ಜರ್ಮನಿಯ ಚಾನ್ಸಲರ್ ಮರ್ಕೆಲ್ ಅವರಿಗೆ ಶುಭ ಹೇಳಿ ಕೈ ಕುಲುಕುವಾಗ ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಜತೆಯಾಗಿಯೇ ಇದ್ದು, ಪರಸ್ಪರ ಮಂದಸ್ಮಿತರಾಗಿದ್ದರು.

ಗಾಂಧಿ ಹುಟ್ಟಿದ ನಾಡಿನಲ್ಲಿ ಮೋದಿ ಹುಟ್ಟಿದ್ದು ವಿಪರ್ಯಾಸ
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ (ಅ 2) ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವಕ್ಕೆ ಶಾಂತಿಮಂತ್ರವನ್ನು ಬೋಧಿಸಿದ ಮಹಾತ್ಮ ಗಾಂಧೀಜಿ ಹುಟ್ಟಿದ ನೆಲದಲ್ಲಿ ನರೇಂದ್ರ ಮೋದಿಯಂಥವರು ಹುಟ್ಟಿದ್ದು ಬಹುದೊಡ್ಡ ವಿಪರ್ಯಾಸ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಬಿಜೆಪಿ ತಿರುಗೇಟು
ಪ್ರಧಾನಿ ವಿರುದ್ದ ಸಿದ್ದು ಟೀಕೆಗೆ ತೀವ್ರ ಕಿಡಿಕಾರಿದ್ದ ಬಿಜೆಪಿ, ಪ್ರಧಾನಿಯವರನ್ನು ಯಾವ ರೀತಿ ಗೌರವಿಸಬೇಕೆಂದು ತಿಳಿಯದವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಇಂಥವರು ನಮ್ಮ ರಾಜ್ಯದ ಸಿಎಂ ಆಗಿದ್ದು ವಿಪರ್ಯಾಸ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications