ಪಿಯೂಷ್ ಗೋಯಲ್ ಜಯ್ ಶಾ ವಕ್ತಾರರೇ? ಆನಂದ್ ಶರ್ಮಾ ಪ್ರಶ್ನೆ
ನವದೆಹಲಿ, ಅಕ್ಟೋಬರ್ 9: ಗಗನಕ್ಕೇರಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಆದಾಯ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇಂದು ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, ಜಯ್ ಶಾ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯಲು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಯ್ ಶಾ ಬೆಂಬಲಕ್ಕೆ ಧಾವಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿರುದ್ಧ ಕಿಡಿಕಾರಿರುವ ಆನಂದ್ ಶರ್ಮಾ, 'ಗೋಯಲ್ ಸಚಿವರೋ ಜಯ್ ಶಾ ವಕ್ತಾರರೋ' ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಭ್ರಷ್ಟಾಚಾರ ದೂರುಗಳ ಕೇಳಿ ಬಂದಾಗ ಬಿಜೆಪಿ ನಾಯಕರಾದ ಎಲ್.ಕೆ ಅಡ್ವಾಣಿ ಮತ್ತು ಬಂಗಾರು ಲಕ್ಷ್ಮಣ್ ರಾಜೀನಾಮೆ ನೀಡಿದ್ದರು. ಅದೇ ರೀತಿ ಅಮಿತ್ ಶಾ ಕೂಡ ರಾಜೀನಾಮೆ ನೀಡಿ ಪಾರದರ್ಶಕ ತನಿಖೆಗೆ ಹಾದಿ ಸುಗಮ ಮಾಡಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.
INC COMMUNIQUE
— INC Sandesh (@INCSandesh) October 9, 2017
भाजपा अध्यक्ष अमित शाह के पुत्र जय शाह के संदिग्ध करोबार के संबंध में प्रेस विज्ञप्ति#AmitShahKiLoot pic.twitter.com/28h2U2buJc
ಇನ್ನು ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್, 'ತಾನೂ ಲಂಚ ಪಡೆಯುವುದಿಲ್ಲ. ಬೇರೊಬ್ಬರಿಗೂ ಲಂಚ ಪಡೆಯಲು ಬಿಡುವುದಿಲ್ಲ' ಎಂದು ನರೇಂದ್ರ ಮೋದಿ ನೀಡಿದ್ದ ಹೇಳಿಕೆ ಏನಾಯ್ತು ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದೆ.












Click it and Unblock the Notifications