PIL On Parliament Inauguration: ಸಂಸತ್ ಭವನ ಉದ್ಘಾಟನೆಗೆ 2 ದಿನಕ್ಕೂ ಮುಂಚೆ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
ಇದೇ ಮೇ 28ರಂದು ಹೊಸ ಸಂಸತ್ ಭವನ ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎರಡು ದಿನಕ್ಕೂ ಮುನ್ನ (ಗುರುವಾರ) ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಭಾರತದ ರಾಷ್ಟ್ರಪತಿಗಳಿಂದಲೇ ನೂತನ ಸಂಸತ್ ಭವನ ಉದ್ಘಾಟಿಸುವಂತೆ ಲೋಕಸಭೆ ಸಚಿವಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.

ನೂತನ ಸಂಸತ್ ಭವನ ಕಟ್ಟಡವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಬೇಕು, ಪ್ರಧಾನಮಂತ್ರಿ ಅಲ್ಲ ಎಂದು ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಎನ್‌ಸಿಪಿ, ಎಡಪಕ್ಷಗಳು ಸೇರಿದಂತೆ 19 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ ಬೆನ್ನಲ್ಲೇ ಪಿಐಎಲ್ ಹಾಕಲಾಗಿದೆ.
ರಾಷ್ಟ್ರಪತಿ ಅವರಿಂದ ಉದ್ಘಾಟನೆ ಮಾಡಿಸದೆ, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರುವುದು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದು ವಕೀಲ ಜಯ ಸುಕಿನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ಸದನವನ್ನು ಕರೆಯುವ ಮತ್ತು ಮುಂದೂಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುತ್ತದೆ. ಸಂಸತ್ತು ಅಥವಾ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದರಿಂದ ಅವರಿಂದಲೇ ಲೋಕಾರ್ಪಣೆ ಮಾಡಬೇಕೆಂದು ಮನವಿ ಮಾಡಲಾಗಿದೆ.

ರಾಷ್ಟ್ರಪತಿ ಸಂಸತ್ತಿನ ಅವಿಭಾಜ್ಯ ಅಂಗ. ಕಟ್ಟಡದ ಶಿಲಾನ್ಯಾಸ ಸಮಾರಂಭದಿಂದಲೂ ರಾಷ್ಟ್ರಪತಿಯನ್ನು ದೂರವಿಟ್ಟಿದ್ದೇಕೆ? ಇದೀಗ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲ. ಕೇಂದ್ರ ಸರಕಾರದ ಈ ನಿರ್ಧಾರ ಸರಿಯಲ್ಲ ಎಂದು ದೂರಲಾಗಿದೆ. ಲೋಕಸಭಾ ಸಚಿವಾಲಯ, ಗೃಹ ಸಚಿವಾಲಯ, ಕಾನೂನು ಸಚಿವಾಲಯಗಳನ್ನು ಅರ್ಜಿದಾರರು ಈ ಪ್ರಕರಣದಲ್ಲಿ ಎದುರಾಳಿ ಕಕ್ಷಿದಾರರನ್ನಾಗಿ ಮಾಡಿದ್ದಾರೆ.
ಹಾಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 28ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,200 ಸಂಸದರುಗಳಿಗೆ ಕಚೇರಿಗಳಿವೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಎನ್‌ಸಿಪಿ, ಎಡಪಕ್ಷಗಳು ಸೇರಿದಂತೆ 19 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದರೆ, ಇದೇ ವೇಳೆ ಎರಡು ವಿಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಲ್ಲದ ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಹಾಗೂ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ) ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿವೆ.
ಸಂಸತ್ ಭವನ ಉದ್ಘಾಟನೆ ದೇಶದ ಪ್ರಜಾಪ್ರಭುತ್ವ ಪಾಲಿಗೆ ಐತಿಹಾಸಿಕ ದಿನ. ಭಿನ್ನಾಭಿಪ್ರಾಯಗಳಿದ್ದರೆ, ಅನಂತರ ಕುಳಿತು ಚರ್ಚಿಸೋಣ ಎಂದು ಬಿಜೆಡಿ ನಾಯಕ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ನೂತನ ಸಂಸತ್ ಭವನ ವಿರೋಧಿಸಿದ್ದ ವಿಪಕ್ಷಗಳು
ಇದಕ್ಕೂ ಮೊದಲು ನೂತನ ಸಂಸತ್ ಭವನ ನಿರ್ಮಿಸಲು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಯೋಜನೆ ಕೈಗೆತ್ತಿಕೊಂಡಾಗ, ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಮಾತ್ರವಲ್ಲದೇ, ಸಂಸತ್ ಭವನ ನಿರ್ಮಾಣದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಆದರೆ, ಸುಪ್ರೀಂ ಕೋರ್ಟ್ ವಿಪಕ್ಷಗಳ ಅರ್ಜಿಯನ್ನು ತಿರಸ್ಕರಿಸಿತ್ತು.
ಈಗಿರುವ ಹಳೆಯ ಸಂಸತ್ ಕಟ್ಟಡ ಬ್ರಿಟಿಷರ ಕಾಲದ್ದಾಗಿದೆ. ದೇಶದ 545 ಲೋಕಸಭೆ ಸದಸ್ಯರು, 250ಕ್ಕೂ ಹೆಚ್ಚು ರಾಜ್ಯಸಭೆ ಸದಸ್ಯರು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಜಾಗವಿರಲಿಲ್ಲ. ಅಲ್ಲದೇ, ಮಳೆ ಬಂದಾಗ ಸೋರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.












Click it and Unblock the Notifications