ಐಎಸ್‌ಐ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುಪಿ ನಿವಾಸಿ, ಪಾಕಿಸ್ತಾನಕ್ಕೆ ರಫೇಲ್ ಜೆಟ್‌ಗಳ ಚಿತ್ರ ರವಾನೆ
ಲಕ್ನೋ, ಆಗಸ್ಟ್ 18: ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಶುಕ್ರವಾರ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಿದೆ.
ಬಂಧಿತ ವ್ಯಕ್ತಿಯನ್ನು ಕಲೀಂ ಎಂದು ಗುರುತಿಸಲಾಗಿದ್ದು, ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಮೂಲಕ ಆತ ದೇಶದ ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಲು ಕೆಲವು ಪ್ರಮುಖ ಕೃತ್ಯಗಳನ್ನು ಎಸಗಲು ಮತ್ತು ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಹಾಳುಮಾಡಲು ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.

ಭಾರತದಲ್ಲಿನ ಭದ್ರತೆಗೆ ಸಂಬಂಧಿಸಿದ ಸ್ಥಳಗಳ ಛಾಯಾಚಿತ್ರಗಳು ಮತ್ತು ವಾಟ್ಸಾಪ್ ಸಂದೇಶಗಳನ್ನು ಐಎಸ್‌ಐ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಲಾಗಿತ್ತು ಎಂದು ವರದಿಗಳು ತಿಳಿಸಿದೆ.
ನವಭಾರತ್ ಟೈಮ್ಸ್ ಪ್ರಕಾರ, ಕಲೀಂ ಭಾರತದಲ್ಲಿ ಜಿಹಾದ್ ಹರಡಲು ಪ್ರಯತ್ನಿಸುತ್ತಿದ್ದ. ಆತನ ಆಪಾದಿತ ಚಟುವಟಿಕೆಗಳ ಬಗ್ಗೆ ಮಾಹಿತಿದಾರರಿಂದ ಪೊಲೀಸರಿಗೆ ಸುಳಿವು ಸಿಕ್ಕಿತು .ಅವರ ಸಹೋದರ ತೆಹ್ಸೀನ್ ಅಥವಾ ತಾಸೀಮ್ ಕೂಡ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಕಲೀಂ ಅಹ್ಮದ್ ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಮತ್ತು ಇಸ್ಲಾಮಿಕ್ ರಾಜ್ಯ ಸ್ಥಾಪನೆಗೆ ಸಕ್ರಿಯವಾಗಿ ಕೆಲಸ ಮಾಡಲು ಸೂಚನೆ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮುಖ್ಯವಾಗೊ ಆತ ನಕಲಿ ಗುರುತನ್ನು ಬಳಸಿಕೊಂಡು ಸಿಮ್ ಕಾರ್ಡ್ ಅನ್ನು ಪಡೆದುಕೊಂಡಿದ್ದನು. ಪಾಕಿಸ್ತಾನದಲ್ಲಿರುವ ತನ್ನ ಸಂಪರ್ಕಗಳಿಗೆ ರಫೇಲ್ ಯುದ್ಧ ವಿಮಾನಗಳ ಚಿತ್ರಗಳು ಸೇರಿದಂತೆ ರಕ್ಷಣಾ ಸ್ಥಾಪನೆಗಳ ಛಾಯಾಚಿತ್ರಗಳನ್ನು ರವಾನಿಸಿದ್ದನು ಎಂದು ತಿಳಿದು ಬಂದಿದೆ.












Click it and Unblock the Notifications