ಇಸ್ರೇಲ್ vs ಇರಾನ್ ಯುದ್ಧ: ಭಾರತದಲ್ಲಿ ಪೆಟ್ರೋಲ್ - ಡೀಸೆಲ್ & ಚಿನ್ನ ಬಲು ದುಬಾರಿ ಸಾಧ್ಯತೆ!
Israel vs Iran conflict: ಇಸ್ರೇಲ್ ಹಾಗೂ ಇರಾನ್ ಸಂಘರ್ಷವು ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಇಸ್ರೇಲ್ ಹಾಗೂ ಇರಾನ್‌ನ ನಡುವೆ ಆಗ್ಗಾಗ್ಗೆ ಸಂಘರ್ಷ ಏರ್ಪಡುತ್ತದೆ. ಈ ಭಾರಿ ಇಸ್ರೇಲ್ ಹಾಗೂ ಇರಾನ್‌ನ ನಡುವೆ ಬಹುದೊಡ್ಡ ಯುದ್ಧವೇ ಶುರುವಾಗಿದೆ. ಇದರಲ್ಲಿ ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಯುದ್ಧವು ಇನ್ನಷ್ಟು ಉಗ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಭಾರತದಲ್ಲಿ ಆರ್ಥಿಕ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಹಾಗೂ ಚಿನ್ನದ ಬೆಲೆ ಬಲು ದುಬಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಇಸ್ರೇಲ್ ಹಾಗೂ ಇರಾನ್‌ನ ನಡುವೆ ಸಂಘರ್ಷ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಾಗಿದೆ. ಯುದ್ಧೋನ್ಮಾದ ಈ ಎರಡೂ ರಾಷ್ಟ್ರಗಳ ನಡುವೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಭಾರತವು ಪೆಟ್ರೋಲ್ - ಡೀಸೆಲ್ ಹಾಗೂ ಕಚ್ಚಾ ತೈಲಗಳಿಗೆ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಯುದ್ಧದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ವಿಪರೀತವಾಗಿ ಏರಿಕೆ ಕಂಡಿದ್ದು ಭಾರತಕ್ಕೂ ಬೆಲೆ ಏರಿಕೆಯ ಬಿಸಿ ಮೂಡುವ ಆತಂಕ ಶುರುವಾಗಿದೆ. ಈ ರಾಷ್ಟ್ರಗಳ ನಡುವೆ ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಭಾರತಕ್ಕೆ ಎದುರಾಗುವ ಮೊದಲ ತಲೆನೋವು ರಾಜತಾಂತ್ರಿಕವಾಗಿ ಹಾಗೂ ವಾಣಿಜ್ಯವಾಗಿ. ಹೌದು ಈ ಎರಡೂ ವಿಚಾರಗಳಲ್ಲೂ ಭಾರತವು ತಟಸ್ಥ ನಿಲುವನ್ನು ಹೊಂದಿದೆ. ಇಸ್ರೇಲ್ ದೇಶವು ಭಾರತದ ಮಿತ್ರ ಹಾಗೂ ಭಾರತಕ್ಕೆ ಸಂಕಷ್ಟದ ಸಮಯದಲ್ಲಿ ನೆರವು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದೇ ಸಂದರ್ಭದಲ್ಲಿ ಇರಾನ್‌ನೊಂದಿಗೂ ಭಾರತವು ಸಮಾನ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಇರಾನ್ vs ಇಸ್ರೇಲ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತವು ಆಲಿಪ್ತ ನೀತಿಯನ್ನು ಹೊಂದಿದೆ. ಅಂದರೆ, ಯಾವುದೇ ರಾಷ್ಟ್ರದ ಪರವಾಗಿಯೂ ಇಲ್ಲ. ಆದರೆ, ಈಗ ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನವು ಇರಾನ್ ಬೆಂಬಲಕ್ಕೆ ಬಂದಿದೆ!

ಈ ವಿಚಾರದಲ್ಲಿ ಭಾರತವು ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದೆ. ಭಾರತದ ವಿದೇಶಾಂಗ ನೀತಿಯು ಎರಡು ದೇಶಗಳ ನಡುವೆ ಸಂಘರ್ಷ ಏರ್ಪಡುವ ವಿಚಾರದಲ್ಲಿ ಮೊದಲಿನಿಂದಲೂ ಹೆಚ್ಚು ಕಾಳಜಿಯ ಹೆಜ್ಜೆಗಳನ್ನು ಇರಿಸಿಕೊಂಡು ಬಂದಿದೆ. ಈಗ ನಡೆಯುತ್ತಿರುವ ಯುದ್ಧವು ಭಾರತದಲ್ಲಿ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಹಾಗೂ ಚಿನ್ನದ ಬೆಲೆ ಭರ್ಜರಿ ಹೆಚ್ಚಳವಾಗುವ ಆತಂಕವೂ ಮೂಡಿದೆ.
ಯುದ್ಧದ ಮುನ್ಸೂಚನೆಯ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ. ಇಸ್ರೇಲ್ ದೇಶವು ಇರಾನಿನ ತೈಲ ಮತ್ತು ಅನಿಲ ಸೌಲಭ್ಯ ಇರುವ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಈ ಬೆಳವಣಿಗೆಯ ನಂತರ ಜಾಗತಿಕ ತೈಲ ಬೆಲೆ ಭಾರೀ ಹೆಚ್ಚಳ ಕಂಡಿದೆ. ಸೋಮವಾರ ಏಷ್ಯಾದಲ್ಲಿ ಅಂದಾಜು 1 ಪ್ರತಿಶತದಷ್ಟು ಕಚ್ಚಾ ತೈಲ ಬ್ಯಾರೆಲ್ ಬೆಲೆ ಹೆಚ್ಚಳವಾಗಿದೆ. ಪ್ರತಿ ಬ್ಯಾರೆಲ್‌ಗೆ $75 (ಅಮೆರಿಕನ್ ಡಾಲರ್) ಮೊತ್ತ ತಲುಪಿದೆ. ಇದರಿಂದ ಸಹಜವಾಗಿಯೇ ವಿಶ್ವದಾದ್ಯಂತ ತೈಲೆ ಬೆಲೆ ಹೆಚ್ಚಳವಾಗುತ್ತಿದೆ.
ಇರಾನ್‌ಗೆ ಭಾರೀ ಹೊಡೆತ: ಇನ್ನು ಇರಾನ್‌ಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಇರಾನ್‌ನ ಕಚ್ಚಾ ತೈಲ ಸಂಗ್ರಹ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿದೆ. ಇಸ್ರೇಲ್‌ನ ದಾಳಿಯು ಈ ಬಾರಿ ಅತ್ಯಂತ ಭೀಕರವಾಗಿತ್ತು. ಇದೀಗ ಇರಾನ್ ಸಹ ಇಸ್ರೇಲ್‌ನ ಮೇಲೆ ತಿರುಗೇಟು ನೀಡುವುದಕ್ಕೆ ಮುಂದಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ - ಡೀಸೆಲ್ ಹಾಗೂ ಇದರೊಂದಿಗೆ ಅನಿಶ್ಚಿತತೆಯಿಂದ ಚಿನ್ನದ ಬೆಲೆಯೂ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications