ಕಚ್ಚಾತೈಲ ಬೆಲೆ ಹೆಚ್ಚಳ: ಮತ್ತೆ ಏರಿಕೆಯಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ?
ನವದೆಹಲಿ, ಮೇ 30: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ತಿಂಗಳು ತಟಸ್ಥವಾಗಿದ್ದ ಕ್ರೂಡ್ ಆಯಿಲ್ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಈಗ ತೈಲ ಬೆಲೆ ಪ್ರತಿ ಬ್ಯಾರೆಲ್ 120 ಡಾಲರ್‌ಗಿಂತ ಹೆಚ್ಚಾಗಿದ್ದು, ಭಾರತದಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯೂರೋಪಿಯನ್ ಒಕ್ಕೂಟದ ಸಭೆಯಲ್ಲಿ ರಷ್ಯಾದಿಂದ ತೈಲ ಆಮದು ನಿರ್ಬಂಧ ಸೇರಿದಂತೆ ರಷ್ಯಾ ಮೇಲೆ ನಿರ್ಬಂಧ ಕುರಿತು ಚರ್ಚಿಸಲು ಸೋಮವಾರ, ಮಂಗಳವಾರ ಸಭೆ ಸೇರಲಿದ್ದು, ಸಭೆಗೂ ಮುನ್ನವೇ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
ಸೋಮವಾರ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120.10 ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದು ಭಾರತದ ತೈಲ ಮಾರುಕಟ್ಟೆ ಮೇಲೂ ಪರಿಣಾಮ ಬೀರಬಹುದು. ಮುಂದಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಹೆಚ್ಚಳವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೆ ಇಳಿಕೆಯಾಗಿದ್ದ ದರ; ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿತ್ತು. ಕೇಂದ್ರದ ನಿರ್ಧಾರದ ಬೆನ್ನಲ್ಲೇ ಹಲವು ರಾಜ್ಯಗಳು ವ್ಯಾಟ್ ಕಡಿತಗೊಳಿಸುವ ಮೂಲಕ ಒಂದಷ್ಟು ಬೆಲೆ ಕಡಿಮೆಯಾಗಿತ್ತು. ಅಗತ್ಯ ವಸ್ತುಗಳ ಪೂರೈಕೆಯಿಂದಾಗಿ ಭಾರತದಲ್ಲಿ ಏಪ್ರಿಲ್ 2022ರಲ್ಲಿ ಹಣದುಬ್ಬರದ ಅಂಕಿ ಅಂಶಗಳು ದೀರ್ಘಕಾಲದ ಗರಿಷ್ಠ ಪ್ರಮಾಣವನ್ನು ದಾಟಿದೆ.
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ವಿರುದ್ಧ ಹಲವು ದೇಶಗಳು ತಿರುಗಿಬಿದ್ದು, ನಿರ್ಬಂಧ ವಿಧಿಸುತ್ತಿದೆ. ಸೋಮವಾರ, ಮಂಗಳವಾರ ಯೋರೋಪಿಯನ್ ಒಕ್ಕೂಟ ಸಭೆ ನಡೆಸಲಿದ್ದು, ಸಭೆಯಲ್ಲಿ ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಜಾಗತಿಕ ಮಾರುಕಟ್ಟಯಲ್ಲಿ, ವಿಶ್ವ ಆರ್ಥಿಕತೆ ಮೇಲೆ ಈ ಯುದ್ಧ ಸಾಕಷ್ಟು ಪ್ರಭಾವ ಬೀರಿದೆ.

ಕಚ್ಚಾತೈಲ ಬೆಲೆ ಮತ್ತೆ ಹೆಚ್ಚಳ; ವಿಶ್ವದ ಅತಿ ದೊಡ್ಡ ತೈಲ ಪೂರೈಕೆ ಮಾಡುವ ರಾಷ್ಟ್ರ ರಷ್ಯಾ. ಯುದ್ಧ, ನಿರ್ಬಂಧದ ಕಾರಣ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಏರುಪೇರಾಗಿದ್ದು, ಈಗ ರಷ್ಯಾದಿಂದ ತೈಲ ಆಮದಿಗೆ ಯೂರೋಪಿಯನ್ ಒಕ್ಕೂಟ ಸಂಪೂರ್ಣ ನಿರ್ಬಂಧ ವಿಧಿಸಿದರೆ ಕಚ್ಚಾತೈಲ ಬೆಲೆ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಹಿಂದೆ, ರಷ್ಯಾದಿಂದ ತೈಲ ಆಮದುಗಳನ್ನು ನಿಷೇಧಿಸುವ ಯುರೋಪಿಯನ್ ಒಕ್ಕೂಟದ ಪ್ರಯತ್ನವನ್ನು ಹಂಗೇರಿಯು ವೀಟೋ ಮಾಡಿತ್ತು. ರಷ್ಯಾದ ತೈಲದ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿರುವ ಹೆಚ್ಚಿನ ಯುರೋಪಿಯನ್ ದೇಶಗಳು ಈ ನಿರ್ಬಂಧದಿಂದ ತೊಂದರೆ ಅನುಭವಿಸುತ್ತಿವೆ.












Click it and Unblock the Notifications