Udhayanidhi Stalin; ಸನಾತನ ಧರ್ಮದ ಬಗ್ಗೆ ಹೇಳಿಕೆ: ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ
ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸೋಮವಾರ ಬಿಹಾರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮುಜಾಫರ್‌ಪುರ ಮೂಲದ ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಲಾಲ್ ಅವರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಉದಯ ನಿಧಿ ಅವರ ಹೇಳಿಕೆಗಳು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿದ್ದಾರೆ.

ರಾಜಕೀಯ ದಿಗ್ಗಜರು ಮತ್ತು ಇತರ ಸೆಲೆಬ್ರಿಟಿಗಳ ವಿರುದ್ಧ ಅರ್ಜಿ ಸಲ್ಲಿಸುವ ಮೂಲಕ ಸುದ್ದಿಯಲ್ಲಿರುವ ಓಜಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ತಮಿಳುನಾಡು ಸಿಎಂ ಮತ್ತು ಕ್ಯಾಬಿನೆಟ್ ಸಚಿವರೂ ಆಗಿರುವ ಅವರ ಪುತ್ರನನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಲಾಗಿದೆ.
ಸನತಾನದ ಧರ್ಮ ನಿರ್ಮೂಲನೆಯಾಗಬೇಕು ಎನ್ನುವ ಹೇಳಿಕೆ
ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಮತ್ತು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಶನಿವಾರ ಆರೋಪಿಸಿದ್ದರು ಮತ್ತು ಅದನ್ನು ಕೊರೊನಾವೈರಸ್, ಮಲೇರಿಯಾ, ಡೆಂಗ್ಯೂ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರಕ್ಕೆ ಹೋಲಿಸಿದ್ದರು. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಅವರ ಹೇಳಿಕೆಗಳು ದೇಶಾದ್ಯಂತ ಬಿಜೆಪಿಯಿಂದ ತೀವ್ರ ವಿರೋಧಕ್ಕೆ ಕಾರಣವಾಯಿತು, ಕೆಲವು ನಾಯಕರು ಇದು ನರಮೇಧದ ಕರೆ ಎಂದು ಆರೋಪಿಸಿದರು ಮತ್ತು ಇತರರು ಉದಯನಿಧಿಯನ್ನು ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ವಿಚಾರಣೆಗೆ ಸಿದ್ಧ ಎಂದಿರುವ ಉದಯ ನಿಧಿ ಸ್ಟಾಲಿನ್
ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆದ ನಂತರ ಪ್ರತಿಕ್ರಿಯೆ ನೀಡಿರುವ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಗೆ ಬದ್ದವಾಗಿದ್ದೇನೆ ಎಂದು ಹೇಳಿದ್ದರು. ಈ ಕುರಿತಂತೆ ಯಾವುದೇ ವಿಚಾರಣೆಗೂ ಸಿದ್ಧ ಎಂದು ಹೇಳಿದ್ದರು. ಅಲ್ಲದೆ ತಾವು ನರಮೇಧಕ್ಕೆ ಯಾವುದೇ ಕರೆ ನೀಡಿಲ್ಲ, ಸನಾತನ ಧರ್ಮದ ನಿರ್ಮೂಲನೆ ಎಂದರೆ ನರಮೇಧ ಮಾಡುವುದಲ್ಲ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ಎಂದರೆ ಕಾಂಗ್ರೆಸ್‌ನವರ ನರಮೇಧ ಎಂದು ಅರ್ಥವಲ್ಲ ಎಂದು ವಾದಿಸಿದ್ದರು. ತಮ್ಮ ಭಾಷಣವು ಸಾಮಾಜಿಕ ಅನಿಷ್ಟಗಳ ಸೂಚಕವಾಗಿದೆ ಎಂದು ಹೇಳಿದರು. ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಹಲವು ಪ್ರಮುಖ ನಾಯಕರು ಬೆಂಬಲಿಸಿದ್ದಾರೆ.












Click it and Unblock the Notifications