ಬಡವರ ಪಾಲಿನ ದೇವರು: ಕಳೆದ 40 ವರ್ಷಗಳಿಂದ ಕೇವಲ 10 ರೂಪಾಯಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ!
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಆಸ್ವತ್ರೆಗೆ ಹೋಗಲು ಭಯಪಡುತ್ತಾರೆ. ಕಾರಣವಿಷ್ಟೇ, ಆಸ್ಪತ್ರೆಗೆ ಕಾಲಿಟ್ಟರೆ ಸಾಕು ಎಲ್ಲಿ ಸಾವಿರಾರು ರೂಪಾಯಿ ಬಿಲ್ ಆಗುವುದೋ ಎಂದು. ವೈದ್ಯಕೀಯ ವೆಚ್ಚ ಗಗನಕ್ಕೇರಿರುವ ಈ ಕಾಲದಲ್ಲಿ, ಸಾಮಾನ್ಯ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಗಗನಕುಸುಮವಾಗಿದೆ. ಆದರೆ, ಬಿಹಾರದ ಪಾಟ್ನಾದಲ್ಲಿರುವ ಒಬ್ಬ ವೈದ್ಯರು ಕಳೆದ 40 ವರ್ಷಗಳಿಂದ ಕೇವಲ 10 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಮೂಲಕ ಅವರು ನಿಜವಾದ ಅರ್ಥದಲ್ಲಿ ರೋಗಿಗಳಿಗೆ ಆಶಾಕಿರಣವಾಗಿದ್ದಾರೆ.
ಹೌದು, ಅವರೇ ಡಾ. ಎಜಾಜ್ ಅಲಿ. ಹಣ ಮತ್ತು ಲಾಭಕ್ಕಿಂತ ಜನಸೇವೆಯೇ ಮುಖ್ಯ ಎಂದು ನಂಬಿರುವ ಇವರು, ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನ ಎತ್ತಿ ಹಿಡಿದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಬಿಹಾರದ ಈ 10 ರೂಪಾಯಿ ವೈದ್ಯರ ನಿಸ್ವಾರ್ಥ ಸೇವೆಯ ಬಗ್ಗೆ ಓದುತ್ತಿರುವಾಗ, ಕನ್ನಡಿಗರಿಗೆ ನಮ್ಮ ಮಂಡ್ಯದ ಹೆಮ್ಮೆಯ '5 ರೂಪಾಯಿ ಡಾಕ್ಟರ್' ಡಾ. ಶಂಕರೇಗೌಡ ಅವರ ನೆನಪಾಗುವುದು ಸಹಜ. ದಶಕಗಳಿಂದ ಕೇವಲ 5 ರೂಪಾಯಿ ನಾಮಮಾತ್ರ ಶುಲ್ಕವನ್ನು ಪಡೆದು ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಶಂಕರೇಗೌಡ ಅವರಂತೆಯೇ ಪಟ್ನಾದ ಡಾ. ಅಲಿ ಕೂಡ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಡವರ ಪಾಲಿನ ದೇವರು: ಡಾ. ಎಜಾಜ್ ಅಲಿ ಅವರ ನಿಸ್ವಾರ್ಥ ಸೇವೆ
ಹಣ ಸಂಪಾದನೆಯೇ ಮುಖ್ಯವಾಗಿರುವ ಇಂದಿನ ಕಾರ್ಪೊರೇಟ್ ಆಸ್ಪತ್ರೆಗಳ ಯುಗದಲ್ಲಿ, ಡಾ. ಎಜಾಜ್ ಅಲಿ ಅವರು ಯಾವಾಗಲೂ ಜನರಿಗೆ ಮತ್ತು ಅವರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅವರು ಅತ್ಯಂತ ಕೈಗೆಟುಕುವ ದರದಲ್ಲಿ ಶಸ್ತ್ರಚಿಕಿತ್ಸೆಗಳನ್ನ ಮಾಡುತ್ತಾರೆ. ತಮ್ಮ ಬಳಿ ಬರುವ ಪ್ರತಿಯೊಬ್ಬ ರೋಗಿಯನ್ನ ಅದೇ ದಿನ ತಪಾಸಣೆ ಮಾಡುವ ನಿಯಮವನ್ನ ಅವರು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ದೂರದ ಹಳ್ಳಿಗಳಿಂದ ಮತ್ತು ಬೇರೆ ಊರುಗಳಿಂದ ಬರುವ ಬಡ ರೋಗಿಗಳಿಗೆ ವಸತಿ ಮತ್ತು ಪ್ರಯಾಣದ ಹೆಚ್ಚುವರಿ ವೆಚ್ಚ ಉಳಿಯುತ್ತದೆ. "ರೋಗಿಗಳು ತಮ್ಮ ಊರುಗಳಿಗೆ ಬೇಗ ಮರಳಬೇಕು, ವಿನಾಕಾರಣ ಖರ್ಚು ಮಾಡಬಾರದು" ಎನ್ನುವುದು ಅವರ ಕಾಳಜಿ.
ಪ್ರತಿದಿನ ಸರಳವಾದ ಕುರ್ತಾ-ಪೈಜಾಮಾ ಧರಿಸಿ, ತಮ್ಮ ಕ್ಲಿನಿಕ್‌ನ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಇವರು, ನಿತ್ಯ 100ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಜೊತೆಗೆ 7-8 ಶಸ್ತ್ರಚಿಕಿತ್ಸೆಗಳನ್ನ ಯಶಸ್ವಿಯಾಗಿ ನಿರ್ವಹಿಸುತ್ತಾರೆ. "ಸಮಾಜಕ್ಕೆ ಇಂತಹ ಸೇವೆ ಸಲ್ಲಿಸುವುದರಿಂದ ನನಗೆ ಅತ್ಯಂತ ನೆಮ್ಮದಿ ಮತ್ತು ತೃಪ್ತಿ ಸಿಗುತ್ತದೆ" ಎಂದು ಎಜಾಜ್ ಹೇಳಿಕೊಳ್ಳುತ್ತಾರೆ.
ಕೈಗೆಟುಕುವ ವೈದ್ಯಕೀಯ ಸೇವೆ: ತಂದೆಯ ಹಾದಿಯಲ್ಲಿ ಮಕ್ಕಳ ಹೆಜ್ಜೆ
ಡಾ. ಅಲಿ ಅವರ ಈ ಸಮಾಜಮುಖಿ ಮತ್ತು ಮಾನವೀಯ ಕಾರ್ಯ ಕೇವಲ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಅವರ ದಿವಂಗತ ಪತ್ನಿ ಕೂಡ ವೈದ್ಯೆಯಾಗಿದ್ದು, ಪತಿಯಂತೆಯೇ ನಿಸ್ವಾರ್ಥ ಸೇವೆಯ ಹಾದಿಯಲ್ಲಿ ಸಾಗಿದ್ದರು. ಈಗ ಅವರ ಮೂವರು ಮಕ್ಕಳು ಸಹ ವೈದ್ಯರಾಗಿದ್ದು, ತಂದೆ-ತಾಯಿಯ ಈ ಪರಂಪರೆಯನ್ನ ಅತ್ಯಂತ ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಅಮೆರಿಕಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಉನ್ನತ ತರಬೇತಿ ಪಡೆದಿರುವ ಅವರ ಮಗ, ತಮ್ಮ ಕನ್ಸಲ್ಟೇಶನ್‌ಗೆ ಕೇವಲ 100 ರೂಪಾಯಿ ಶುಲ್ಕ ಪಡೆಯುತ್ತಾರೆ. ಅದೇ ರೀತಿ, ಸ್ತ್ರೀರೋಗ ತಜ್ಞೆಯಾಗಿರುವ (ಗೈನಕಾಲಜಿಸ್ಟ್) ಅವರ ಮಗಳು ಕೇವಲ 50 ರೂಪಾಯಿ ಶುಲ್ಕ ವಿಧಿಸುತ್ತಾರೆ.
ಎಷ್ಟೋ ಬಡ ರೋಗಿಗಳ ಬಳಿ ಈ ಸಣ್ಣ ಮೊತ್ತವನ್ನ ನೀಡಲು ಸಾಧ್ಯವಾಗದಿದ್ದಾಗ, ಸಂಪೂರ್ಣ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಾರೆ. ಅಥವಾ ರೋಗಿಗಳಿಗೆ ಅನುಕೂಲವಾಗುವಂತೆ ಕಂತುಗಳಲ್ಲಿ ಪಾವತಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಬಿಹಾರ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮಾದರಿ
ಡಾಕ್ಟರ್ ಎಂದರೆ ಕೇವಲ ರೋಗಕ್ಕೆ ಔಷಧ ನೀಡುವವರಲ್ಲ, ಬದಲಿಗೆ ಅವರಲ್ಲಿ ಅಪಾರವಾದ ಮಾನವೀಯತೆಯೂ ಇರಬೇಕು ಎಂಬುದನ್ನ ಡಾ. ಎಜಾಜ್ ಅಲಿ ಮತ್ತು ಅವರ ಕುಟುಂಬ ಸಾಬೀತುಪಡಿಸಿದೆ. ದಿನದಿಂದ ದಿನಕ್ಕೆ ಆಸ್ಪತ್ರೆಗಳ ಶುಲ್ಕ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಎಷ್ಟೋ ಕುಟುಂಬಗಳಿಗೆ ಇವರ ಆಸ್ಪತ್ರೆಯೇ ನಿಜವಾದ ಸಂಜೀವಿನಿಯಾಗಿದೆ.
ಸತತ 40 ವರ್ಷಗಳಿಂದ ಒಂದೇ ರೀತಿಯಲ್ಲಿ, ಬದಲಾಗದ ಅದೇ 10 ರೂಪಾಯಿ ಶುಲ್ಕದಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಒಂದು ಅದ್ಭುತ ಸಾಧನೆ. ಮನುಷ್ಯತ್ವವೇ ಮರೆಯಾಗುತ್ತಿರುವ ಈ ಕಾಲದಲ್ಲಿ ಇಂತಹ ವೈದ್ಯರಿಂದಲೇ ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂದು ಜನರು ಕೊಂಡಾಡುತ್ತಿದ್ದಾರೆ.


Click it and Unblock the Notifications
