ಸಂಸತ್ ದಾಳಿಗೆ 15 ವರ್ಷ, ರೂವಾರಿ ಅಜರ್ ಗೆ ಪಾಕ್ ಫುಡ್ಡು!
ನವದೆಹಲಿ, ಡಿಸೆಂಬರ್ 13: ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ ಮೇಲೆ ದಾಳಿಯಾಗಿ ಡಿಸೆಂಬರ್ 13ಕ್ಕೆ ಹದಿನೈದು ವರ್ಷಗಳಾಯಿತು. ಭಾರತದ ಸಂಸತ್ ಮೇಲೆ ಜೈಶ್ ಇ ಮೊಹ್ಮದ್ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ದಾಳಿಯ ಗಾಯಕ್ಕೆ ಮತ್ತೊಂದು ವಾರ್ಷಿಕವೂ ಸೇರಿಹೋಗಿದೆ.
ಅಂದಿನ ದಾಳಿಯ ಹಿಂದೆ ಇದ್ದ ಮಾಸ್ಟರ್ ಮೈಂಡ್ ಇನ್ನೂ ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡು ಇದ್ದಾನೆ. ಕಂದಹಾರ್ ಗೆ ವಿಮಾನ ಅಪಹರಿಸಿ, ಉಗ್ರ ಮಸೂದ್ ಅಜರ್ ನ ಬಿಡುಗಡೆ ಮಾಡುವಂತೆ ಒತ್ತಡ ಹಾಕಿ, ಅದರಲ್ಲೂ ಸಫಲವೂ ಅಗಿದ್ದಾಯಿತು. ಆ ನಂತರವೇ ಜೈಶ್ ಇ ಮೊಹ್ಮದ್ ಎಂಬ ಉಗ್ರಸಂಘಟನೆ ವಿಷ ಬೀಜಾಂಕುರವಾಯಿತು.[ದೆಹಲಿ ವಿವಿ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ಬಂಧನ]

ಅಜರ್ ನನ್ನು ಕಾನೂನು ಕಟ್ಟಳೆಯೊಳಗೆ ಎಳೆದು ತರ್ತೀವಿ ಎಂದು ಪರ್ವೇಜ್ ಮುಷರಫ್ ತಿಪ್ಪೆ ಸಾರಿಸಿದರೆ ವಿನಾ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಅಜರ್ ಮಾತ್ರ ಉಗ್ರ ಸಂಘಟನೆ ಆರಂಭಿಸಿ, ಭಾರತದ ಸಂಸತ್ ಮೇಲೆ ದಾಳಿ ಮಾಡಿಸಿಬಿಟ್ಟ. 2001ರ ಡಿಸೆಂಬರ್ 13ರಂದು ಜೈಶ್ ಇ ಮೊಹ್ಮದ್ ಉಗ್ರರು ಸಂಸತ್ ಸಮುಚ್ಚಯದಲ್ಲಿ ಗುಂಡು ಹಾರಿಸಿ, ಹನ್ನೆರಡು ಮಂದಿ ಸಾವಿಗೆ ಕಾರಣರಾದರು.
ಸಂಸತ್ ಕಲಾಪ ಮುಂದೂಡಿದ ನಲವತ್ತು ನಿಮಿಷದ ನಂತರ ದಾಳಿ ನಡೆದಿತ್ತು. ಆ ವೇಳೆ ಎಲ್ಲ ಸಂಸದರು ಹಾಗೂ ಸಚಿವರು ಸಂಸತ್ ನ ಒಳಗೆ ಇದ್ದಿದ್ದರಿಂದ ಯಾರಿಗೇನೂ ತೊಂದರೆ ಆಗಲಿಲ್ಲ. ಒಂದು ಗಂಟೆಗಳ ಗುಂಡಿನ ಚಕಮಕಿ ನಂತರ ಉಗ್ರಗಾಮಿಗಳನ್ನು ಕೊಲ್ಲಲಾಯಿತು. ಈ ಸಂಬಂಧ ಅಫ್ಜಲ್ ಗುರು, ಶೌಕತ್ ಹುಸೇನ್, ಎಸ್ ಎಆರ್ ಗಿಲಾನಿ ಮತ್ತು ನವಜೋತ್ ಸಂಧುನನ್ನು ಬಂಧಿಸಲಾಯಿತು.[ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್]
ಆ ಪೈಕಿ ಸಂಧುಗೆ ಒಂದು ಪ್ರಕರಣ ಬಿಟ್ಟು ಉಳಿದಿದ್ದರಲ್ಲಿ ಖುಲಾಸೆಯಾಯಿತು. ಉಳಿದವರಿಗೆ ಮರಣದಂಡನೆ ಘೋಷಿಸಲಾಯಿತು. ಅದರಲ್ಲಿ ಗಿಲಾನಿಗೆ ಖುಲಾಸೆಯಾದರೆ, ಹುಸೇನ್ ನ ಮರಣದಂಡನೆ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿ ಬದಲಿಸಲಾಯಿತು. ಅಫ್ಜಲ್ ಗುರು ಮರಣದಂಡನೆ ಖಾತ್ರಿಯಾದರೆ, ಗಿಲಾನಿ ಖುಳಾಸೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಫೆಬ್ರವರಿ 2012ರಲ್ಲಿ ಅಫ್ಜಲ್ ಗುರುವನ್ನು ನೇಣಿಗೇರಿಸಲಾಯಿತು.
ಹದಿನೈದು ವರ್ಷಗಳ ನಂತರ
ಆ ಹೇಯ ದಾಳಿ ನಡೆದು ಹದಿನೈದು ವರ್ಷಗಳ ನಂತರ ಕೂಡ ತುಂಬ ಬದಲಾಗಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ದಾಳಿಗಳು ಭಾರತದಲ್ಲಿ ಆಗುತ್ತಲೇ ಇವೆ. ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತ ಸಲ್ಲಿಸಿದ ಮನವಿ ಪಾಕ್ ನಿಂದ ಯಾವ ಸ್ಪಂದನೆ ಇಲ್ಲ.[ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?]
ಅಜರ್ ಇಂದಿಗೂ ಐಎಸ್ ಐ ಪಾಲಿಗೆ ನೆಚ್ಚಿನ ವ್ಯಕ್ತಿ. ನಗ್ರೋಟಾ, ಪಠಾಣ್ ಕೋಟ್ ದಾಳಿಯಲ್ಲಿ ಕೂಡ ಜೈಶ್ ಇ ಮೊಹ್ಮದ್ ಉಗ್ರರ ಕೈವಾಡ ಇತ್ತು. ಆ ದಾಳಿ ನಡೆದಿದ್ದು ಕೂಡ ಇದೇ ಅಜರ್ ಆದೇಶದಂತೆ. ಅಜರ್ ಮೇಲೆ ನಿಷೇಧ ಹೇರಬೇಕೆಂಬ ಭಾರತದ ಕೋರಿಕೆಗೆ ಚೀನಾ ಅಡ್ಡಗಾಲಾಗಿ ನಿಂತಿದೆ.












Click it and Unblock the Notifications