ಭಾರತದಲ್ಲಿ ನಂದಿನಿ ಆರನೇ 'ಹೆಚ್ಚು ಆಯ್ಕೆಯಾದ' ಎಫ್‌ಎಂಸಿಜಿ ಬ್ರ್ಯಾಂಡ್: ಪಾರ್ಲೆಗೆ ಅಗ್ರ ಸ್ಥಾನ
ಬೆಂಗಳೂರು, ಆಗಸ್ಟ್. 03: ಪ್ರಮುಖ ಮಾರ್ಕೆಟಿಂಗ್ ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ಪ್ರಕಟಿಸಿದ 'ಬ್ರಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ' ವರದಿಯ ಪ್ರಕಾರ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಭಾರತದಲ್ಲಿ ಆರನೇ 'ಅತ್ಯಂತ ಆಯ್ಕೆಯಾದ' ಫಾಸ್ಟ್ ಮೂವಿಂಗ್ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ಬ್ರ್ಯಾಂಡ್ ಆಗಿದೆ.
ಗುಜರಾತಿನ ಅಮುಲ್ ಹೊರತುಪಡಿಸಿ ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಡೈರಿ ಬ್ರ್ಯಾಂಡ್ ನಂದಿನಿಯಾಗಿದೆ. ಈ ಪಟ್ಟಿಯಲ್ಲಿ ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಮುಲ್ ಮೂರನೇ ಸ್ಥಾನ ಗಳಿಸಿದರೆ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಐದನೇ ಸ್ಥಾನದಲ್ಲಿ ನಿಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಂದಿನಿ ಒಂದು ಸ್ಥಾನ ಮೇಲಕ್ಕೆ ಜಿಗಿದಿದೆ.

ಈ ವರದಿಯು ಗ್ರಾಹಕ ರೀಚ್ ಪಾಯಿಂಟ್‌ಗಳ (CRP) ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ಇದು ದೇಶದ ಮನೆಗಳ ಸಂಖ್ಯೆ, ನಿರ್ದಿಷ್ಟ ಬ್ರಾಂಡ್ ಅನ್ನು ಖರೀದಿಸುವ ಶೇಕಡಾವಾರು ಕುಟುಂಬಗಳು ಮತ್ತು ಗ್ರಾಹಕರು ಒಂದೇ ಬ್ರಾಂಡ್ ಅನ್ನು ವರ್ಷದಲ್ಲಿ ಎಷ್ಟು ಬಾರಿ ಖರೀದಿಸಿದ್ದಾರೆ ಎಂಬುದನ್ನು ಪರಿಗಣಿಸಿ ವರದಿ ಸಿದ್ದಪಡಿಸುತ್ತದೆ.ಪರಿಣಾಮವಾಗಿ, ಶ್ರೇಯಾಂಕಗಳು ಬ್ರ್ಯಾಂಡ್ ಗಳಿಸುತ್ತಿರುವ ಆದಾಯಕ್ಕೂ ಮೀರಿ ಬ್ರ್ಯಾಂಡ್‌ನತ್ತ ಗ್ರಾಹಕರ ಒಲವನ್ನು ಮಾತ್ರ ಈ ವರದಿ ಬಹಿರಂಗಪಡಿಸುತ್ತವೆ.
ಕಾಂತಾರ್ ತನ್ನ ವಾರ್ಷಿಕ ಬ್ರಾಂಡ್ ಫುಟ್‌ಪ್ರಿಂಟ್ ಇಂಡಿಯಾ ವರದಿಯ 11 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ರಚಿಸಲಾಗಿದೆ. ಇದರ ಆಧಾರದ ಮೇಲೆ ಶ್ರೇಣಿಯನ್ನು ಪಟ್ಟಿ ಮಾಡಲಾಗಿದೆ.

ಪಾನೀಯಗಳು, ಆಹಾರ, ಡೈರಿ, ಆರೋಗ್ಯ ಮತ್ತು ಸೌಂದರ್ಯ ಮತ್ತು ಗೃಹಬಳಕೆ ಅನ್ನು ಐದು ಜಾಗತಿಕ ಎಫ್‌ಎಂಸಿಜಿ ವಲಯಗಳು ಎಂದು ಗುರುತಿಸಲಾಗಿದ್ದು, ಇದನ್ನು ಖರೀದಿಸುವ ಗ್ರಾಹಕರ ಆದ್ಯತೆಯ ಮೇರಿಗೆ ವರದಿಯನ್ನು ಪರಿಗಣಿಸಲಾಗುತ್ತದೆ. ಇನ್ನು, ವರದಿ ಹೇಳುವಂತೆ, ಕೊರೊನಾ ಸಾಂಕ್ರಾಮಿಕದ ನಂತರ ಭಾರತದಾದ್ಯಂತ ಗ್ರಾಹಕರು ತಮ್ಮ ವೆಚ್ಚವನ್ನು ಮಿತಿಗೊಳಿಸಲು ಸಣ್ಣ ಪ್ಯಾಕ್‌ಗಳನ್ನು ಖರೀದಿಸಲು ಆದ್ಯತೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ವರ್ಷದ ವರದಿ ಮತ್ತು ಶ್ರೇಯಾಂಕಗಳ ಕುರಿತು ವರ್ಲ್ಡ್ ಪ್ಯಾನೆಲ್ ಡಿವಿಷನ್ ಇಂಡಿಯಾದ ಕಾಂತಾರ್‌ನ ವ್ಯವಸ್ಥಾಪಕ ನಿರ್ದೇಶಕ ಕೆ ರಾಮಕೃಷ್ಣನ್ ಮಾತನಾಡಿದ್ದು, "ಗ್ರಾಹಕರ ಆಯ್ಕೆಯು ಬ್ರ್ಯಾಂಡ್‌ಗೆ ಅಂತಿಮ ಪರೀಕ್ಷೆಯಾಗಿದೆ. ಕಳೆದ 10 ವರ್ಷಗಳಿಂದ ಬ್ರ್ಯಾಂಡ್ ಹೆಜ್ಜೆಗುರುತನ್ನು ಅಳೆಯಲು ವ್ಯಾಪಕವಾಗಿ ಮೆಚ್ಚುಗೆ ಪಡೆದ ಶ್ರೇಯಾಂಕ ವ್ಯವಸ್ಥೆ ಇದಾಗಿದೆ. ನಾವು ಈ ವರ್ಷಗಳಲ್ಲಿ ನೋಡಿದಂತೆ, ಗ್ರಾಹಕರು ಮತ್ತೆ ಮತ್ತೆ ಸಣ್ಣ ಖರೀದಿಗಳನ್ನು ಮಾಡುತ್ತಿದ್ದು, ಅದು ಅವರ ಆಯ್ಕೆಯನ್ನು ಬದಲಿಸುತ್ತದೆ. ಮನೆ ಬಳಕೆಯಿಂದ ಹೊರಗಿರುವ ಖರೀದಿಗಳು ಹೆಚ್ಚುತ್ತಿರುವ ಕಾರಣ ಮತ್ತು ವಿಭಿನ್ನ ಆಯ್ಕೆಗಳು ಇರುವುದು ಕೂಡ ಇದಕ್ಕೆ ಕಾರಣ. ಖರೀದಿಸುವ ಪ್ಯಾಕ್‌ಗಳು ಹೆಚ್ಚಾದಂತೆ ಬ್ರಾಂಡ್ ನಿಷ್ಠೆ ಕಡಿಮೆಯಾಗುವ ಸಂಭವ ಕೂಡ ಇದೆ" ಎಂದಿದ್ದಾರೆ.












Click it and Unblock the Notifications