Eid al-Adha: ಏಕಾದಶಿ ಎಂದು ಪ್ರಾಣಿಬಲಿ ಮುಂದೂಡಿದ ಪಂಢರಪುರ ಮುಸ್ಲಿಂ ಸಮುದಾಯ

Eid al-Adha: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಪಂಢರಪುರ ಇಂದು ದೇಶಕ್ಕೇ ಮಾದರಿಯಾಗುವಂತಹ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಿದೆ. ಹಿಂದೂಗಳ ಅತ್ಯಂತ ಪವಿತ್ರ ದಿನವಾದ ಅಧಿಕ ಮಾಸದ ಏಕಾದಶಿ ಮತ್ತು ಮುಸ್ಲಿಮರ ಬಕ್ರೀದ್ ಹಬ್ಬ ಒಂದೇ ದಿನ ಬಂದಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮುಸ್ಲಿಂ ಸಮುದಾಯವು ತಮ್ಮ ಹಬ್ಬದ ಆಚರಣೆಯ ಭಾಗವಾದ ಪ್ರಾಣಿ ಬಲಿಯನ್ನು ಸ್ವಯಂಪ್ರೇರಿತವಾಗಿ ಮುಂದೂಡುವ ಮೂಲಕ ಭಾವೈಕ್ಯತೆ ಮೆರೆದಿದೆ.

ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಪಂಢರಪುರ ಪಟ್ಟಣದ ಮುಸ್ಲಿಂ ಸಮುದಾಯವು ಈ ಬಾರಿಯ ಬಕ್ರೀದ್ ಹಬ್ಬದಂದು ಪ್ರಾಣಿಬಲಿ ನೀಡದಿರಲು ನಿರ್ಧರಿಸಿದೆ. ಈ ಬಾರಿ ಬಕ್ರೀದ್ ಏಕಾದಶಿಯ ದಿನವೇ ಬಂದಿರುವುದರಿಂದ ಸಮುದಾಯವು ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.

Pandharpur Muslims Postpone Bakrid Sacrifice to Respect Ekadashi Set Example of Communal Harmony

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಪಂಢರಪುರ

ಪಂಢರಪುರವು ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಏಕಾದಶಿಯಂದು ಇಲ್ಲಿಗೆ ವಿಠ್ಠಲನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಮುಸ್ಲಿಂ ಸಮುದಾಯವು ಪ್ರಾಣಿಬಲಿ ಪ್ರಕ್ರಿಯೆಯನ್ನು ಎರಡು ದಿನಗಳ ಕಾಲ ಮುಂದೂಡಲು ನಿರ್ಧರಿಸಿದೆ.

ಪ್ರಾಣಿ ಬಲಿ ನೀಡದಿರಲು ನಿರ್ಧಾರ

ಮುಸ್ಲಿಂ ಸಮುದಾಯದ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿ, 'ನಾನು ಪಂಢರಪುರದಲ್ಲೇ ವಾಸಿಸುತ್ತಿದ್ದೇನೆ. ಇಲ್ಲಿನ ದೇವಾಲಯದ ವಿವಿಧ ಉತ್ಸವಗಳೊಂದಿಗೆ ದಶಕಗಳಿಂದ ಒಡನಾಟ ಹೊಂದಿದ್ದೇನೆ. ಶ್ರೀ ವಿಠ್ಠಲನ ಭಕ್ತರ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ಬಾರಿ ಪ್ರಾಣಿ ಬಲಿ ನೀಡದಿರಲು ನಾವು ನಿರ್ಧರಿಸಿದ್ದೇವೆ,' ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಮತ್ತೊಬ್ಬ ಸದಸ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, ಅಧಿಕ ಮಾಸದ ಏಕಾದಶಿಯು ಮೂರು ವರ್ಷಕ್ಕೊಮ್ಮೆ ಬರುತ್ತದೆ. ಈ ವಿಶೇಷ ಸಂದರ್ಭದಲ್ಲಿ ವಿಠ್ಠಲನ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ಪಂಢರಪುರಕ್ಕೆ ಆಗಮಿಸುತ್ತಾರೆ. ನಾವು ಆ ದಿನದಂದು ಪ್ರಾಣಿ ಬಲಿ ನೀಡದಿರಲು ನಿರ್ಧರಿಸಿದ್ದೇವೆ ಮತ್ತು ಆ ಪ್ರಕ್ರಿಯೆಯನ್ನು ನಂತರ ಕೈಗೊಳ್ಳುತ್ತೇವೆ,' ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, 'ಪಂಢರಪುರದ ಮುಸ್ಲಿಂ ಸಮುದಾಯವು ಶ್ರೀ ವಿಠ್ಠಲನ ಮೇಲೆ ಅಪಾರ ಶ್ರದ್ಧೆ ಮತ್ತು ನಂಬಿಕೆ ಹೊಂದಿರುವುದು ಕೂಡ ಈ ನಿರ್ಧಾರದ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ನಾವು ಇಂತಹ ಮಹತ್ವದ ನಿರ್ಧಾರಕ್ಕೆ ಮುಂದಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಬಕ್ರೀದ್ ಹಬ್ಬವು ಇಂತಹದೇ ಧಾರ್ಮಿಕ ಸಂದರ್ಭಗಳೊಂದಿಗೆ ಏಕಕಾಲಕ್ಕೆ ಬಂದಿತ್ತು. ಆಗ ಪಟ್ಟಣದ ಮುಸ್ಲಿಂ ಸಮುದಾಯವು ಪ್ರಾಣಿಬಲಿ ಪ್ರಕ್ರಿಯೆಯಿಂದ ದೂರ ಉಳಿದು ಸೌಹಾರ್ದತೆ ಮೆರೆದಿತ್ತು,' ಎಂದು ಹೇಳಿದರು.

ದೇಶಾದ್ಯಂತ ಬಕ್ರೀದ್ ಹಬ್ಬದ ಸಡಗರ

ಭಾರತದಾದ್ಯಂತ ಗುರುವಾರ ಬಕ್ರೀದ್ ಹಬ್ಬವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಿದರು. ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಮುಂಜಾನೆಯೇ ಸಾವಿರಾರು ಜನರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮತ್ತೊಬ್ಬ ವ್ಯಕ್ತಿ ಮಾತನಾಡಿ 'ದೆಹಲಿಯ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಾವು ದೇಶದ ಪ್ರಗತಿ ಮತ್ತು ಶಾಂತಿಗಾಗಿ ಪ್ರಾರ್ಥಿಸಿದೆವು. ಈ ಹಬ್ಬವು ಕೇವಲ ಆಚರಣೆಯಲ್ಲ, ಇದು ಸಹೋದರತ್ವದ ಸಂಕೇತ,' ಎಂದು ಹೇಳಿದ್ಧಾರೆ.

ಮತ್ತೊಂದೆಡೆ ಭಾರತದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಗುರುವಾರ ವಿವಿಧ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಎಲ್ಲಾ ಈದ್ಗಾ ಮತ್ತು ಮಸೀದಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆಯ ನಡುವೆಯೇ ಪ್ರಾರ್ಥನೆ ಸಲ್ಲಿಸಲಾಯಿತು. ರಾಜಸ್ಥಾನದಲ್ಲಿ ಸಾವಿರಾರು ಭಕ್ತರು ಜಮಾಯಿಸಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಅಜ್ಮೇರ್‌ನ ಖ್ವಾಜಾ ಗರೀಬ್ ನವಾಜ್ ದರ್ಗಾದಲ್ಲಿರುವ ಪವಿತ್ರ ಜನ್ನತಿ ದರ್ವಾಜಾವನ್ನು ಗುರುವಾರ ಮುಂಜಾನೆಯೇ ತೆರೆಯಲಾಗಿತ್ತು. ಬಕ್ರೀದ್ ಹಬ್ಬದ ವಿಶೇಷ ಸಂದರ್ಭದಲ್ಲಿ ಈ ಪವಿತ್ರ ದ್ವಾರವನ್ನು ತೆರೆಯುವುದು ಇಲ್ಲಿನ ಸಂಪ್ರದಾಯವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಪಂಢರಪುರದ ಈ ಮಾದರಿ ನಡೆ ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಧರ್ಮದ ಹೆಸರಲ್ಲಿ ಗೋಡೆಗಳನ್ನು ಕಟ್ಟುವ ಬದಲು, ಪ್ರೀತಿಯ ಸೇತುವೆ ಕಟ್ಟುವ ಕೆಲಸವನ್ನು ಇಲ್ಲಿನ ಮುಸ್ಲಿಂ ಸಮುದಾಯದವರು ಮಾಡಿ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+