ಮೂವರು ಭಯೋತ್ಪಾದಕರನ್ನು ಮುಗಿಸಿದ ಭಾರತೀಯ ಸೇನೆ: ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆಗಳ ಗುಂಡಿನ ದಾಳಿ- ವಿಕೋಪದತ್ತ ಪರಿಸ್ಥಿತಿ
ಬಾರಾಮುಲ್ಲಾ, ಸೆಪ್ಟೆಂಬರ್ 16: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಬಾರಾಮುಲ್ಲಾದಲ್ಲಿ ಭಾರತೀಯ ಸೇನೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಈ ಮೂಲಕ ಶನಿವಾರ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ.
ಎಲ್‌ಒಸಿ ದಾಟಲು ಮೂವರು ಭಯೋತ್ಪಾದಕರಿಗೆ ಪಾಕಿಸ್ತಾನ ಸಹಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪಡೆಗಳು ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿವೆ ಎಂದು ಸೇನೆ ಹೇಳಿದೆ.
'ಒಳನುಸುಳುವಿಕೆ ಶಂಕೆ ಬಂದ ತಕ್ಷಣವೇ ಭಾರತೀಯ ಸೇನೆ ಮತ್ತು ಜಮ್ಮು- ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಒಳನುಸುಳುವಿಕೆಯ ಪ್ರಯತ್ನವನ್ನು ಇಂದು ವಿಫಲಗೊಳಿಸಲಾಯಿತು. ಮೂವರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಮುಂದಿನ ಅನಾಹುತಗಳನ್ನು ತಪ್ಪಿಸಲು ನಾವು ಎಚ್ಚರಿಕೆಯ ನಡೆಗಳನ್ನು ಅನುಸರಿಸುತ್ತಿದ್ದೇವೆ' ಎಂದು ಪಿರ್ ಪಂಜಾಲ್ ಬ್ರಿಗೇಡ್‌ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲೋನ್ ಹೇಳಿದ್ದಾರೆ.

ಪಾಕ್ ಸೇನೆ ಉಗ್ರರಿಗೆ ರಕ್ಷಣೆ ನೀಡಿದೆ: ಭಾರತ ಆರೋಪ
ಇಬ್ಬರು ಭಯೋತ್ಪಾದಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಆದರೆ ಮೂರನೇ ಭಯೋತ್ಪಾದಕನ ದೇಹವನ್ನು ಪಡೆಯಲು ಪ್ರಯತ್ನಿಸಿದಾಗ, ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಮೂರನೇ ಭಯೋತ್ಪಾದಕನ ದೇಹವನ್ನು ಹಿಂಪಡೆಯುವ ಯತ್ನದಲ್ಲಿ ನಾವಿದ್ದವು. ಆಗ ಪಾಕ್ ಸೇನೆ ಮಧ್ಯಪ್ರವೇಶಿಸಿ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇದು 2021 ರಲ್ಲಿ ಒಪ್ಪಿಕೊಂಡಿರುವ ಎಲ್‌ಒಸಿ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಭಾರತೀಯ ಸೇನೆ ಆರೋಪಿಸಿದೆ.
'ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಬಾರಾಮುಲ್ಲಾದ ಉರಿ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಇಂದು ಬೆಳಿಗ್ಗೆ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಒಳನುಸುಳಲು ಪ್ರಯತ್ನಿಸಿದ ಮೂವರು ಭಯೋತ್ಪಾದಕನ್ನು ಹತ್ಯೆ ಮಾಡಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ. ಅವರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ;.ಮೂರನೇ ಭಯೋತ್ಪಾದಕನನ್ನು ಕೊಲ್ಲಲಾಯಿತು. ಆದರೆ ದೇಹವನ್ನು ಹಿಂಪಡೆಯಲು ಆಗಿಲ್ಲ. ಮಧ್ಯಪ್ರವೇಶಿಸಿರುವ ಪಾಕಿಸ್ತಾನ ಗುಂಡಿನ ದಾಳಿ ನಡೆಸುತ್ತಿದೆ. ಈಗಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ' ಎಂದು ಭಾರತೀಯ ಸೇನೆ ಹೇಳಿದೆ.












Click it and Unblock the Notifications