Pahalgam Terror Attack: "ಚೌಕಿದಾರ" ಎಲ್ಲಿ ಎಂದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮೀಜಿ!
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರು ಪ್ರಶ್ನೆ ಮಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೇಶದಲ್ಲಿ ಇಷ್ಟೊಂದು ದೊಡ್ಡ ದುರ್ಘಟನೆ ನಡೆದಿದೆ. ಚೌಕಿದಾರ ಎಲ್ಲಿ... ಚೌಕಿದಾರನನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದಿರುವ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇಷ್ಟಕ್ಕೂ ಈ ಘಟನೆಯ ಬಗ್ಗೆ ಸ್ವಾಮೀಜಿ ಹೇಳಿದ್ದೇನು, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ಮಾಹಿತಿ ಇಲ್ಲಿದೆ.
ಪಹಲ್ಗಾಮ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಜ್ಯೋತಿರ್ಮಠದ ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ದೊಡ್ಡ ದುರ್ಘಟನೆಯಾದರೂ, ಚೌಕಿದಾರನನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

"ನಮ್ಮ ಮನೆಯಲ್ಲಿ ಯಾವುದೇ ದುರ್ಘಟನೆ ನಡೆದರೆ, ನಾವು ಮೊದಲು ಯಾರನ್ನು ಪ್ರಶ್ನೆ ಮಾಡುತ್ತೇವೆ. ಮೊದಲು ಹಿಡಿಯುವುದೇ ಸೆಕ್ಯೂರಿಟಿ (ಚೌಕಿದಾರ)ಯನ್ನು. ನೀನು ಎಲ್ಲಿದ್ದೆ ಎಂದು ಮೊದಲು ನಾವು ಚೌಕಿದಾರನನ್ನು ಪ್ರಶ್ನೆ ಮಾಡುತ್ತೇವೆ. ನೀನು ಇರುವುದು ಯಾಕೆ, ನೀನು ಇರುವಾಗ ಈ ರೀತಿ ಘಟನೆ ಯಾಕೆ ನಡೆಯಿತು ಎಂದು ಪ್ರಶ್ನೆ ಮಾಡುತ್ತೇವೆ" ಎಂದು ಪಿಟಿಐಗೆ ಹೇಳಿದ್ದಾರೆ.
ಸ್ವಾಮೀಜಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇಲ್ಲಿ ಚೌಕಿದಾರನ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಇಲ್ಲಿ ನಾನೇ ಚೌಕಿದಾರ ಅಂತ ಹೇಳುತ್ತಾರೆ. ಆದರೆ, ಚೌಕಿದಾರ ತನ್ನ ಕೆಲಸವನ್ನು ಮಾಡಿದ್ದರೆ. ಇಲ್ಲಿ ಚೌಕಿದಾರ ತನ್ನ ಕೆಲಸದಲ್ಲಿ ಪಕ್ಕಾ ಆಗಿದ್ದರೆ ಯಾರಾದರೂ ಬಂದರೆ ಅವರನ್ನು ಎದುರಿಸಬೇಕಿತ್ತು (ಉಗ್ರರನ್ನು ನಿಯಂತ್ರಿಸಬೇಕಿತ್ತು). ಇಲ್ಲಿ ಆ ರೀತಿ ಏನೂ ಆಗಲಿಲ್ಲ. ಅವರು ಬಂದರೂ ಇಲ್ಲಿ ದಾಳಿ ಮಾಡಿದರೂ ಅಷ್ಟೇ ಆರಾಮಾಗಿ ಹಿಂದಿರುಗಿದರು. ಎಲ್ಲಿ ನಮ್ಮ ಚೌಕಿದಾರ್ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು, ನಮ್ಮ ದೇಶದಲ್ಲಿ ಚೌಕಿದಾರನ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಈಗ ನಾವು ಅವರಿಗೆ ಪಾಠ ಕಲಿಸುತ್ತೇವೆ. ಸದೆಬಡೆಯುತ್ತೇವೆ ಎಂದು ಹೇಳಲಾಗುತ್ತಿದೆ. ಅವರು ಪಾಕಿಸ್ತಾನದಿಂದ ಬಂದಿದ್ದರು ಅಂತ ಹೇಳುತ್ತಿದ್ದೀರಿ... ಇಷ್ಟು ಬೇಗ ಹೇಗೆ ಗೊತ್ತಾಯ್ತು ಅವರು ಪಾಕಿಸ್ತಾನದಿಂದ ಬಂದಿದ್ದು ಅಂತಾ. ಇಷ್ಟು ಬೇಗ ನಿಮಗೆ ಗೊತ್ತಾಗಿದ್ದೇ ಆದರೆ ಈ ಘಟನೆ ನಡೆಯುವುದಕ್ಕಿಂತ ಮುಂಚೆ ಯಾಕೆ ನಿಮಗೆ ಗೊತ್ತಾಗಲಿಲ್ಲ ಅಂತಲೂ ಅವರು ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನದಿಂದ ಬಂದಿದ್ದಾರೆ ಎನ್ನುವುದು ನಿಮಗೆ ಖಚಿತವಾದರೆ, ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಅಥವಾ ಪ್ರತಿಕ್ರಿಯೆ ನೀಡಿ. ನೀವು ಸಿಂಧೂ ನದಿ ನೀರನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದೀರಿ. ನಿಮಗೆ ನೀರು ನಿಲ್ಲಿಸಲು ಅಥವಾ ನೀರು ಅಲ್ಲಿಗೆ ಹೋಗದಂತೆ ತಡೆಯುವುದಕ್ಕೆ ಯಾವುದೇ ಉಪಾಯವೇ ಇಲ್ಲ. ಪಾಕಿಸ್ತಾನಕ್ಕೆ ನೀರು ಹೋಗದಂತೆ ತಡೆಯುವುದಕ್ಕೆ ಈಗ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಡ್ಯಾಂ ಸೇರಿದಂತೆ ನೀರು ಹರಿದು ಹೋಗದಂತೆ ತಡೆಯುವುದಕ್ಕೆ ಏನಿಲ್ಲಾ ಎಂದಾದರೂ 20 ವರ್ಷಗಳೇ ಬೇಕು ಅಂತಲೇ ಹೇಳಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುದ್ದಿ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಕೇಳದ ಪ್ರಶ್ನೆಯನ್ನು ಸ್ವಾಮೀಜಿ ಕೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications