Pahalgam Terror Attack: ಪ್ರವಾಸಿಗರ ಸುರಕ್ಷಿತ ರವಾನೆಗೆ ಮಹತ್ವದ ಕ್ರಮ ತೆಗೆದುಕೊಂಡ ಕೇಂದ್ರ ಸರ್ಕಾರ!
ಜಮ್ಮು - ಕಾಶ್ಮೀರದಲ್ಲಿ ನಡೆದಿರುವ ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರವು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಕಾಶ್ಮೀರದಲ್ಲಿ ಐ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶ್ರೀನಗರದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಿದ್ದಾರೆ. ಇದೀಗ ಅಲ್ಲಿನ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದುಕೊಂಡುವ ಬರುವ ಕೆಲಸಗಳು ಆಗುತ್ತಿವೆ.
ಕಾಶ್ಮೀರದ ಪಹಲ್ಗಾಮ್‌ನಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ವೈಮಾನಿಕ ಕಂಪನಿಗಳು ಏರ್ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಈಗಾಗಲೇ ಕಾಶ್ಮೀರದ ಪ್ರವಾಸಿ ತಾಣಗಳಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಮೃತರ ಶವಗಳನ್ನು ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಟಿಕೆಟ್ ದರ ಹೆಚ್ಚಿಸದಿರಲು ಸೂಚನೆ: ಇನ್ನು ಭಯೋತ್ಪಾದನಾ ಕೃತ್ಯ ನಡೆದ ಸ್ಥಳದಿಂದ ಹಾಗೂ ಕಾಶ್ಮೀರದ ಇತರೆ ಪ್ರವಾಸಿ ತಾಣಗಳಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಹೆಚ್ಚಿನ ಟಿಕೆಟ್ ದರ ವಿಧಿಸದಂತೆ ವೈಮಾನಿಕ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ವಿಮಾನಯಾನ ಸಚಿವರೊಂದಿಗೆ ಚರ್ಚೆ: ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಚರ್ಚೆ ನಡೆದಿದೆ. ಏರ್‌ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ನಾಗರಿಕ ವಿಮಾನಯಾನ ಸಚಿವರೊಂದಿಗೂ ಮಾತನಾಡಿದ್ದೇವೆ. ಏರ್‌ಲೈನ್ ಟಿಕೆಟ್ ದರದ ಕುರಿತು ಗಮನಹರಿಸಲು ಡಿಜಿಸಿಎಗೂ ಸೂಚನೆ ನೀಡಿದ್ದೇನೆ ಎಂದು ಜೋಶಿ ಅವರು ಹೇಳಿದ್ದಾರೆ. ಕಾಶ್ಮೀರದ ಪ್ರವಾಸಿ ತಾಣಗಳಿಂದ ಕನ್ನಡಿಗರು ಸೇರಿದಂತೆ ಪ್ರವಾಸಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋಶಿ ತಿಳಿಸಿದರು.
ಶಾಂತಿ ನೆಲೆಸಲು ಕಟ್ಟು ನಿಟ್ಟಿನ ಕ್ರಮ: ಜಮ್ಮು - ಕಾಶ್ಮೀರದಲ್ಲಿ 2019ರಿಂದ ಇತ್ತೀಚಿನ ವರ್ಷಗಳಲ್ಲಿ ಶಾಂತಿ ನೆಲೆಸಿದ್ದನ್ನು ಸಹಿಸದೆ ಹೇಡಿಗಳು ಇಂಥ ಹೇಯ ಕೃತ್ಯವೆಸಗಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ಕೊಡಲಿದೆ ಎಂದಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದ ನಿರ್ಣಯ, ಕಾರ್ಯಗಳು ಯಶಸ್ವಿಗೊಳ್ಳುತ್ತಿರುವುದನ್ನು ಸಹಿಸಲಾಗದೆ ಭಯೋತ್ಪಾದಕರು ಹೀಗೆ ಪ್ರವಾಸಿಗರ ಮೇಲೆ ಹೇಡಿತನದ ಕೃತ್ಯ ಎಸಗಿದ್ದಾರೆ. ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ಹತ್ತಿಕ್ಕಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿ ಶಾಂತಿ ಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ತೀರ ಆಘಾತಕಾರಿ. ಅತ್ಯಂತ ಪ್ರವಾಸಿಗರ ಆಕರ್ಷಕ ಸ್ಥಳದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ವೇಳೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ರಾವ್ ಮೃತ ಪಟ್ಟಿರೋದು ದುರದೃಷ್ಟಕರ. ಉಗ್ರರ ದಾಳಿಯ ಕುರಿತು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವರಿಂದ ಮಾಹಿತಿ ಪಡೆದಿದ್ದು, ಪ್ರವಾಸಿ ತಾಣದಲ್ಲಿ ಸಿಲುಕಿರುವವರ ರಕ್ಷಣೆ ಹಾಗೂ ಪರಿಸ್ಥಿತಿ ಹತೋಟಿಗೆ ತರಲು ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಈಗಾಗಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಶ್ರೀನಗರಗೆ ತೆರಳಿದ್ದಾರೆ. ಶಾಂತಿ ಕೆಡವಲು ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಆಕರ್ಷಣೀಯ ತಾಣದಲ್ಲಿ ಆತಂಕ ನಿರ್ಮಾಣ ಮಾಡಲು ಉಗ್ರರು ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ. ಈ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಗಳಿಗೆ ಶಕ್ತಿ ನೀಡಲು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications