43,800 ಕೋಟಿಗೂ ಹೂಡಿಕೆ; 31,000 ಉದ್ಯೋಗ ಸೃಷ್ಟಿ : ಬಿಗ್ ಅಪ್‌ಡೇಟ್ ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ನವದೆಹಲಿ, ನವೆಂಬರ್ 04: ಭಾರತ ಸರ್ಕಾರವು ಉತ್ಪಾದನಾ ಉತ್ತೇಜನಾ ಯೋಜನೆಯ (PLI) 3ನೇ ಸುತ್ತಿನ PLI 1.2 ಅನ್ನು ಆರಂಭಿಸಿದ್ದು, ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಕೇಂದ್ರದ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ನವದೆಹಲಿಯಲ್ಲಿ ಚಾಲನೆ ನೀಡಿದರು.
ವಿಶೇಷ ಉಕ್ಕು (ಸ್ಪೆಷಾಲಿಟಿ ಸ್ಟೀಲ್) ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಬದ್ಧತೆಯನ್ನು ಈ ಉತ್ತೇಜಕ ಯೋಜನೆ ಮತ್ತಷ್ಟು ದೃಢಪಡಿಸಲಿದೆ. ಈ ಉಪಕ್ರಮವು ಭಾರತದ ಕೈಗಾರಿಕಾ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಸಾಗುವ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಆತ್ಮನಿರ್ಭರ ಭಾರತ ಸಾಕಾರದ ಪ್ರಮುಖ ಆಧಾರಸ್ತಂಭವಾಗಿ ಉಕ್ಕು ಕ್ಷೇತ್ರವು ನಿಂತಿದೆ. ಅಲ್ಲದೆ, ಭಾರತವನ್ನು ಸ್ವಾವಲಂಬಿ, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಕೈಗಾರಿಕಾ ಉತ್ಪಾದನೆಯ ಪ್ರತಿಯೊಂದು ಕ್ಷೇತ್ರದಲ್ಲಿ ತಾಂತ್ರಿಕವಾಗಿ ಮುಂದುವರಿದಂತೆ ಮಾಡುವ ಧ್ಯೇಯವನ್ನು ಈ ಯೋಜನೆ ಹೊಂದಿದೆ ಎಂದು ಹೇಳಿದರು.

ಭಾರತದ ಉಕ್ಕು ವಲಯಕ್ಕೆ ಪರಿವರ್ತನಾ ನೀತಿ
ಜುಲೈ 2021ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ವಿಶೇಷ ಉಕ್ಕಿನ ಉತ್ತೇಜನಕ್ಕಾಗಿ ಒಟ್ಟು ₹6,322 ಕೋಟಿ ಮೊತ್ತದ PLI ಯೋಜನೆಯನ್ನು ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿತ್ತು. ಇದು ರಕ್ಷಣೆ, ಏರೋಸ್ಪೇಸ್, ಇಂಧನ, ಆಟೋಮೊಬೈಲ್ ಮತ್ತು ಮೂಲಸೌಕರ್ಯದಂತಹ ವಲಯಗಳಲ್ಲಿ ಬಳಸಲಾಗುವ ಹೆಚ್ಚಿನ ಮೌಲ್ಯದ, ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಯನ್ನು ಉತ್ತೇಜಿಸಲು ಉದ್ದೇಶಿಸಿದ ಯೋಜನೆಯಾಗಿದೆ ಎಂದು ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.
ಈ ಯೋಜನೆಯು ₹43,874 ಕೋಟಿ ಮೌಲ್ಯದ ಹೂಡಿಕೆ ಆಕರ್ಷಿಸಿ, 30,760 ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭಾರತದಲ್ಲಿ ಹೊಸದಾಗಿ 14.3 ಮಿಲಿಯನ್ ಟನ್ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಬೃಹತ್ ಉದೇಶ ಹೊಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 2025 ರಂತೆ ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸುವ ಕಂಪನಿಗಳು ಈಗಾಗಲೇ ₹22,973 ಕೋಟಿ ಹೂಡಿಕೆ ಮಾಡಿ 13,284 ಉದ್ಯೋಗಗಳನ್ನು ಸೃಷ್ಟಿಸಿವೆ. ಮೊದಲ ಎರಡು ಸುತ್ತುಗಳಿಗೆ ಬಂದಿರುವ ಪ್ರತಿಕ್ರಿಯೆ ಹೆಚ್ಚು ಉತ್ತೇಜನಕಾರಿಯಾಗಿದೆ. ಈ ಯಶಸ್ಸು ಭಾರತದ ಸುಧಾರಣಾ ಆಧರಿತ ಮತ್ತು ಉದ್ಯಮ ಚಾಲಿತ ನೀತಿ ಚೌಕಟ್ಟಿನ ಬಲವನ್ನು ಧೃಢವಾಗಿ ತೋರುತ್ತದೆ.
PLI 1.2: ಸುಧಾರಿತ ಉಕ್ಕಿನ ವರ್ಗಗಳಿಗೆ ಒಂದು ಉತ್ತೇಜನ
ಹೊಸದಾಗಿ ಪ್ರಾರಂಭಿಸಲಾದ PLI 1.2 ಸುತ್ತಿನ ಉತ್ತೇಜನ ಯೋಜನೆಯು ಮುಂದಿನ ಪೀಳಿಗೆಯ ಕೈಗಾರಿಕಾ ಮತ್ತು ರಕ್ಷಣಾ ಅನ್ವಯಿಕೆಗಳಿಗೆ ಅಗತ್ಯವಾದ ವಸ್ತುಗಳಾದ ಸೂಪರ್ ಮಿಶ್ರಲೋಹಗಳು, CRGO ಉಕ್ಕು, ಸ್ಟೇನ್‌ಲೆಸ್ ಸ್ಟೀಲ್ ಉದ್ದ ಮತ್ತು ಸಮತಟ್ಟಾದ ಉತ್ಪನ್ನಗಳು, ಟೈಟಾನಿಯಂ ಮಿಶ್ರಲೋಹಗಳು ಮತ್ತು ಲೇಪಿತ ಉಕ್ಕುನಂತಹ ಮುಂದುವರಿದ ಮತ್ತು ಉದಯೋನ್ಮುಖ ವರ್ಗಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (MSME) ಗಳು ಮತ್ತು ಹಿಂದಿನ ಹಂತಗಳನ್ನು ಅನುಸರಿಸಿ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿದ ಅಥವಾ ನವೀಕರಿಸಿದ ಅಸ್ತಿತ್ವದಲ್ಲಿರುವ ಉತ್ಪಾದಕರಿಗೆ ಹೊಸ ಅವಕಾಶ ಮಾತು ಮಾರ್ಗಗಳನ್ನು ಈ ಯೋಜನೆ ತೆರೆಯುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು. PLI 1.2 ಅನ್ನು ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಗೆ ಜಾಗತಿಕ ಕೇಂದ್ರವಾಗುವತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ರೂಪಿಸಲಾಗಿದೆ. ಹೊಸ ಹಂತವು ಭಾರತೀಯ ಉಕ್ಕು ತಯಾರಕರನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಹೇಳಿದರು.












Click it and Unblock the Notifications