'ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಬರುತ್ತಾರೆ': ಹಿಜಾಬ್ ವಿವಾದಕ್ಕೆ ಬಿಜೆಪಿ ಶಾಸಕ ಕಿಡಿ
ಜೈಪುರ ಜನವರಿ 30: ಕರ್ನಾಟಕದಲ್ಲಿದ್ದ ಹಿಜಾಬ್ ವಿವಾದ ಸದ್ಯ ರಾಜಸ್ಥಾನಕ್ಕೂ ಎಂಟ್ರಿ ಕೊಟ್ಟಿದೆ. ಬಿಜೆಪಿ ಶಾಸಕರೊಬ್ಬರು ಶಾಲೆಗೆ ಭೇಟಿ ನೀಡಿದ ಬೆನ್ನಲ್ಲೇ ಹಿಜಾಬ್ ವಿವಾದ ಮುನ್ನೆಲೆಗೆ ಬಂದಿದೆ. ಶಾಸಕರ ಹೇಳಿಕೆಯನ್ನು ವಿರೋಧಿಸಿ ವಿದ್ಯಾರ್ಥಿನಿಯರು ಸೋಮವಾರ ಬೀದಿಗಿಳಿದರು.
ಬಿಜೆಪಿ ಶಾಸಕ ಬಾಲ ಮುಕುಂದ್ ಆಚಾರ್ಯ ಅವರು ಗಣರಾಜ್ಯೋತ್ಸವದ ವೇಳೆ ವಾಲ್ಡ್ ಸಿಟಿಯ ಗಂಗಾಪೋಲ್ ಪ್ರದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಡ್ರೆಸ್ ಕೋಡ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಇದರಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ಮಾಡಿದರು. ಈ ವೇಳೆ ಪೋಷಕರು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದರು.

ವಿದ್ಯಾರ್ಥಿಯೊಬ್ಬರು, "ಅವರು ನಮ್ಮನ್ನು ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಕೇಳಿದರು. ಕೆಲವು ಹುಡುಗಿಯರು ಮೌನವಾಗಿದ್ದಾಗ, ಹೀಗೆ ಮಾಡಲು ನಿಮಗೆ ಸೂಚಿಸಲಾಗಿದೆಯೇ ಎಂದು ಅವರು ಕೇಳಿದರು. ಅವರು ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು" ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಪೋಷಕರು ಹಾಗೂ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ಮಾಡಿದರು. ಪೊಲೀಸರು ರಾಜಿ ಮಾಡಿದ ನಂತರ ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಸ್ಥಳದಿಂದ ತೆರಳಿದರು.
ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಆಚಾರ್ಯ ಅವರು ವಿಡಿಯೋ ಬಿಡುಗಡೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ಎರಡು ವಿಭಿನ್ನ ಡ್ರೆಸ್ ಕೋಡ್ ಇದೆಯೇ ಎಂದು ನಾನು ಪ್ರಾಂಶುಪಾಲರನ್ನು ಕೇಳಿದೆ. ಗಣರಾಜ್ಯೋತ್ಸವ ಅಥವಾ ಯಾವುದೇ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಿದಾಗ ಪ್ರತ್ಯೇಕ ಡ್ರೆಸ್ ಕೋಡ್ ಇದೆಯೇ? ಇದ್ದರೆ ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಬರುತ್ತಾರೆ" ಎಂದು ನಾನು ಹೇಳಿದೆ ಎಂದು ಅವರು ಹೇಳಿದ್ದಾರೆ. ಇದು ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ.
ಈ ಬಗ್ಗೆ ಕಾಂಗ್ರೆಸ್ ಶಾಸಕ ಅಮೀನ್ ಕಗ್ಗಿ ಆಚಾರ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಜೈಪುರದ ಸೌಹಾರ್ದತೆ ಮತ್ತು ಕೋಮು ಸೌಹಾರ್ದತೆಯನ್ನು ಆಚಾರ್ಯ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಫೆ.2ರೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಮಾಂಸದಂಗಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಬಾಲ ಮುಕುಂದ್ ಆಚಾರ್ಯ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಚುನಾವಣೆಯಲ್ಲಿ ಗೆದ್ದ ನಂತರ ಅಕ್ರಮ ಮಾಂಸದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೀದಿಗಿಳಿದಿದ್ದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದ
ಎರಡು ವರ್ಷಗಳಿಗೂ ಹೆಚ್ಚು ಕಾಲ ಹಿಜಾಬ್ ಸಮಸ್ಯೆ ಕರ್ನಾಟಕವನ್ನು ತಲ್ಲಣಗೊಳಿಸಿತ್ತು. 2022ರಲ್ಲಿ ಆಗಿನ ಮುಖ್ಯಮಂತ್ರಿ ಬಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಸ್ಕಾರ್ಫ್‌ಗಳನ್ನು ನಿಷೇಧಿಸಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕ ಹೈಕೋರ್ಟ್ ನಿಷೇಧವನ್ನು ಎತ್ತಿಹಿಡಿದಿತ್ತು.
ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 'ಜನರು ಏನು ಬೇಕಾದರೂ ತಿನ್ನಬಹುದು ಮತ್ತು ಧರಿಸಬಹುದು' ಎಂದು ಘೋಷಿಸಿತು. ಇದು ನಿಷೇಧವನ್ನು ರದ್ದುಗೊಳಿಸುವ ಭರವಸೆಯನ್ನು ಹೆಚ್ಚಿಸಿದೆ.
'ಹಿಜಾಬ್‌ಗೆ ಈಗ ಯಾವುದೇ ನಿಷೇಧವಿಲ್ಲ. (ಮಹಿಳೆಯರು) ಹಿಜಾಬ್ ಧರಿಸಿ ಎಲ್ಲಿ ಬೇಕಾದರೂ ಹೋಗಬಹುದು. (ನಿಷೇಧ) ಆದೇಶವನ್ನು ಹಿಂಪಡೆಯಲು ಸೂಚಿಸಿದ್ದೇನೆ, ನೀವು ಹೇಗೆ ಧರಿಸುತ್ತೀರಿ ಮತ್ತು ಏನು ತಿನ್ನುತ್ತೀರಿ ಎಂಬುದು ನಿಮ್ಮ ಆಯ್ಕೆಯಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಬಿಜೆಪಿಯಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆಗ ನಿಷೇಧವನ್ನು ಹಿಂತೆಗೆದುಕೊಳ್ಳಲು ಯಾವುದೇ ಸರ್ಕಾರಿ ಆದೇಶವನ್ನು ನೀಡಿಲ್ಲ ಎಂದು ಸಿಎಂ ಹೇಳಿದರು.












Click it and Unblock the Notifications