ರಾಹುಲ್: ಸಿಂಗ್ ಸರಕಾರ ಹಿಗ್ಗಾಮುಗ್ಗ ತರಾಟೆಗೆ

ಶಿಕ್ಷೆಗೆ ಗುರಿಯಾದ ಶಾಸಕರು/ ಸಂಸದರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಂಬಂಧ ಸುಪ್ರೀಂಕೋರ್ಟಿಗೆ ಸಡ್ಡು ಹೊಡೆದು, ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಶುದ್ಧ ತಪ್ಪು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಡಾಖಂಡಿತವಾಗಿ ಹೇಳಿದ್ದಾರೆ.
'ಆ ಸುಗ್ರೀವಾಜ್ಞೆ ಶುದ್ಧ ನಾನ್ ಸೆನ್ಸ್ ಕಣ್ರೀ. ಅದನ್ನು ಹರಿದು ಬಿಸಾಕಬೇಕು. ರಾಜಕೀಯ ಹಿತಾಸಕ್ತಿ ಕಾಯ್ದುಕೊಳ್ಳಲು ಈ ಸುಗ್ರೀವಾಜ್ಞೆ ತರಲಾಗಿದೆ' ಎಂದು ರಾಹುಲ್ ಗರಂ ಆಗಿದ್ದಾರೆ. (ಇದನ್ನು ಓದಿ)
ರಾಜಕೀಯ ವಲಯದಲ್ಲಿ ರಾಹುಲ್ ಗಾಂಧಿಯ ಮಾತುಗಳು ತೀವ್ರ ಅಚ್ಚರಿಯನ್ನುಂಟುಮಾಡಿದೆ. ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಇದನ್ನು ಹೇಗೆ ಅರಗಿಸಿಕೊಳ್ಳತ್ತದೋ ಎಂದು ಕಾದುನೋಡುವಂತಾಗಿದೆ.
ಮನಮೋಹನ ಸಿಂಗ್ ವಿರುದ್ಧ ರಾಹುಲ್ ತಿರುಗಿಬಿದ್ದಿರುವುದು 'ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತಾಗಿದೆ. ಇನ್ನೇನು ಸರಕಾರದ ಅಧಿಕಾರ ಕೊನೆಗೊಳ್ಳುತ್ತಿರುವ ಹೊತ್ತಿನಲ್ಲಿ ರಾಹುಲ್ ಹೀಗೆ ತಮ್ಮ ಪ್ರಧಾನಿಗೆ ಪಾಠ ಮಾಡಲು ಹೋಗಿರುವುದು ತುಂಬಾ ವಿಳಂಬವಾಗಿದೆ' ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಏನೆಲ್ಲ ಹೇಳಿದರೆಂದರೆ 'ಈ ಸುಗ್ರೀವಾಜ್ಞೆ ರಾಜಕೀಯ ಲಾಭಕ್ಕಾಗಿ ಹುಟ್ಟಿದ ಕೂಸು. ನನ್ನ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಇಂತಹ ರಾಜಿ/ಸಂಧಾನಗಳಿಂದ ದೂರವಿರಬೇಕು' ಎಂದು ರಾಹುಲ್ ಉಚಿತ ಸಲಹೆ ನೀಡಿದರು.
ಆಶ್ಚರ್ಯದ ಸಂಗತಿಯೆಂದರೆ ಬಿರುಗಾಳಿಯಂತೆ ಬಂದು ಮಾಧ್ಯಮದವರನ್ನು ಮಾತನಾಡಿಸಿದ 44 ವರ್ಷದ ರಾಹುಲ್ ಗಾಂಧಿ ಇದೊಂದೇ ವಿಷಯಕ್ಕೆ ತಮ್ಮ ಆಕ್ರೋಶವನ್ನು ಸೀಮಿತಗೊಳಿಸಿದರು.












Click it and Unblock the Notifications