ಕಾಂಗ್ರೆಸ್ ಸಂಸದ ಮನೆಗೆ ಹೋಗುವ ಕಾಲ ಬಂದಿದೆ!

ರಾಜ್ಯಸಭೆ ಸದಸ್ಯ ರಶೀದ್ ಮಸೂದ್ (66) ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಘೋಷಿಸಿದೆ. ಅವರಿಗೆ ಶಿಕ್ಷೆಯ ಪ್ರಮಾಣ ( 7 ವರ್ಷ ಜೈಲುವಾಸ) ಅಕ್ಟೋಬರ್ 1ರಂದು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಂಸತ್ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.
ನ್ಯಾಯಾಲಯ ಅಪರಾಧಿ ಎಂದು ತೀರ್ಪಿತ್ತರೂ ಮೇಲ್ಮನವಿ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಸಂಸದರು ಅಥವಾ ಶಾಸಕರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿತ್ತು.
ಆದರೆ ಜನತಾ ಪ್ರಾತಿನಿಧ್ಯ ಕಾಯಿದೆಯ ಈ ವಿಧಿಯನ್ನು (subsection 4 of Section 8 of Representation of the People Act) ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದು ಪಡಿಸಿ, ತಕ್ಷಣದಿಂದ ಹೊಸ ಕಾನೂನುನ್ನು ಜಾರಿಗೆ ತರಬೇಕು ಎಂದು ಜುಲೈ 10ರಂದು ಕೇಂದ್ರಕ್ಕೆ ಖಡಕ್ ಆದೇಶ ನೀಡಿತ್ತು.
ಕೇಂದ್ರಕ್ಕೆ ಈ ಸುಪ್ರೀಂ ಆದೇಶ ಪಾಲನೆ ಅನಿವಾರ್ಯವಾಗಿದ್ದು, ರಶೀದ್ ಮಸೂದ್ ಅವರ ರಾಜ್ಯಸಭೆ ಸದಸ್ಯತ್ವವನ್ನು ರದ್ದುಗೊಳಿಸುವ ಅನಿವಾರ್ಯತೆಗೆ ಸಿಲುಕಿದೆ. ಆದರೆ ಕೇಂದ್ರವು ತನ್ನ ವಿಶೇಷಾಧಿಕಾರ ಉಳಿಸಿಕೊಂಡು ಸುಪ್ರೀಂ ಆದೇಶವನ್ನು ನಿಶ್ಶಸ್ತ್ರಗೊಳಿಸಲು ಸಂಸತ್ತಿನಲ್ಲಿ ಇತ್ತೀಚೆಗೆ ಹೊಸ ವಿಧೇಯಕ ಅಂಗೀಕರಿಸಿದೆ.
ಆದರೆ ಅದಿನ್ನೂ ಸರಕಾರಿ ಆದೇಶವಾಗಿ ಗೆಜೆಟ್ ಪ್ರಕಟಣೆ ಬಾಕಿ ಉಳಿದಿದೆ. ಅಷ್ಟರೊಳಗಾಗಿ ಈ ಸುಪ್ರೀಂ ಆದೇಶ ಪಾಲನೆ ಅನಿವಾರ್ಯತೆಯಲ್ಲಿ ಸಿಲುಕಿದೆ.
ವಿಪಿ ಸಿಂಗ್ ಸರಕಾರದಲ್ಲಿ 1990-91ರಲ್ಲಿ ಆರೋಗ್ಯ ಸಚಿವರಾಗಿದ್ದ ಮಸೂದ್, ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಅನರ್ಹರಿಗೆ ಎಂಬಿಬಿಎಸ್ ಸೀಟ್ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಮಸೂದ್ ಕರಾಮತ್ತಿನಿಂದ ಸೀಟು ಗಿಟ್ಟಿಸಿದ್ದ 9 ವಿದ್ಯಾರ್ಥಿಗಳನ್ನೂ ದೋಷಿ ಎಂದು ಘೋಷಿಸಲಾಗಿದೆ.
ದುರ್ದೈವವೆಂದರೆ ಅವರಲ್ಲೊಬ್ಬ ಮಸೂದ್ ಸಂಬಂಧಿಕನಾಗಿದ್ದು, ಬಾಲಾಪರಾಧಿಯಾಗಿದ್ದಾನೆ. ಪ್ರಕರಣದಲ್ಲಿ ಅಂದಿನ ತ್ರಿಪುರಾ ಮುಖ್ಯಮಂತ್ರಿ ಮತ್ತು ಸುಧೀರ್ ರಂಜನ್ ಮಜುಂದಾರ್ ಮತ್ತು ಆರೋಗ್ಯ ಸಚಿವ ಕಾಶಿ ರಾಮ್ ರಿಯಾಂಗ್ ಸಹ ಆಪಾದಿತರಾಗಿದ್ದರು. ಆದರೆ ಅವರಿ ವಿಚಾರಣೆ ಹಂತದಲ್ಲಿ ಇಹಲೋಕ ವ್ಯಾಪಾರ ಮುಗಿಸಿದ್ದರು.












Click it and Unblock the Notifications