ಲೋಕಸಭೆ ಚುನಾವಣೆಗೆ ಸಿದ್ಧತೆ: ವಿಪಕ್ಷಗಳ ಒಳಗೆ ನಡುಕ ಶುರು?
ನವದೆಹಲಿ: ಸಣ್ಣ ಸಣ್ಣ ಮಾತಿಗೂ ಕಿರಿಕ್, ಒಂದು ಮೀಟಿಂಗ್ ಮಾಡೋದಕ್ಕೆ ಕಿತ್ತಾಟ. ಇದು ವಿರೋಧ ಪಕ್ಷಗಳ ಈಗಿನ ಸ್ಥಿತಿ. ಹೀಗೆ ಚಿಕ್ಕ ಮಕ್ಕಳಂತೆ ಜಗಳ ಆಡುವ ವಿರೋಧ ಪಕ್ಷಗಳ ನಾಯಕರ ನಡುವೆ ಒಗ್ಗಟ್ಟಿನ ಕೊರತೆಯು ಎದ್ದು ಕಾಣುತ್ತಿದೆ. ಆದರೆ ಇದಕ್ಕೆಲ್ಲಾ ಬೆಸ್ಟ್ ಮೆಡಿಸಿನ್ ಕೊಡಲು ತಯಾರಿ ನಡೆದಿದೆ. ಏನದು ಔಷಧಿ ಅಂದ್ರಾ? ಮುಂದೆ ಓದಿ.
2024ರ ಲೋಕಸಭೆ ಚುನಾವಣೆಯಲ್ಲಿ BJP ವಿರುದ್ಧ ಗೆಲುವು ಸಾಧಿಸುವುದು ವಿಪಕ್ಷ ನಾಯಕರ ದೊಡ್ಡ ಗುರಿ. ಹೀಗಾಗಿಯೇ ಎದ್ದುಬಿದ್ದು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಆದರೆ ಇದೆಲ್ಲಾ ವರ್ಕೌಟ್ ಆಗುತ್ತಿಲ್ಲ. ಯಾಕಂದ್ರೆ ವಿರೋಧ ಪಕ್ಷಗಳ ಒಳಗೇ 2-3 ಬಣಗಳು ತಮ್ಮ ತಮ್ಮ ನಡುವೆಯೇ ಕಿರಿಕಿರಿ ಮಾಡಿಕೊಳ್ಳುತ್ತಿವೆ. ಜೂನ್ 12ರಂದು ನಡೆಯಬೇಕಿದ್ದ ವಿಪಕ್ಷಗಳ ಸಭೆ ಕೂಡ ಹೀಗಾಗಿಯೇ ಕ್ಯಾನ್ಸಲ್ ಆಗಿದೆ ಅನ್ನೋ ಆರೋಪ ಇದೆ. ಆದ್ರೆ ಇಷ್ಟೆಲ್ಲದರ ನಡುವೆ ವಿಪಕ್ಷ ನಾಯಕರ ಒಗ್ಗಟ್ಟು ಕಾಪಾಡಲು ರಣತಂತ್ರವೂ ರೆಡಿಯಾಗಿದೆ (Opposition Meeting).

ಕಿರಿಕ್ ಸರಿ ಮಾಡುತ್ತಾ ಸಮಿತಿ?
ಅಷ್ಟಕ್ಕೂ ವಿರೋಧ ಪಕ್ಷಗಳ ಮುಖ್ಯಸ್ಥರು ಅಂದ್ರೆ ಆಯಾ ಪಕ್ಷಗಳ ಅಧ್ಯಕ್ಷರು ಸಮಯಕ್ಕೆ ಸರಿಯಾಗಿ ಸಂಪರ್ಕಕ್ಕೆ ಸಿಗುವುದಿಲ್ಲ. ಹೀಗಾಗಿ ಸಲಹೆ ಪಡೆಯಲು ಸಮಸ್ಯೆ ಎದುರಾಗುತ್ತಿದೆ. ಇದನ್ನೆಲ್ಲಾ ಬಗೆಹರಿಸಲು ಕೆಲವು ಸಮಿತಿಗಳನ್ನ ರಚಿಸಬೇಕು ಎಂಬ ಚಿಂತನೆಯಲ್ಲಿ ವಿಪಕ್ಷ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಸಮಿತಿಗಳ ರಚನೆ ಬಗ್ಗೆ ಕೆಲವು ಪಕ್ಷಗಳು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿವೆ. ಆದರೆ ಇದ್ಯಾವುದೂ ಈವರೆಗೂ ಫೈನಲ್ ಆಗಿಲ್ಲ, ಹೀಗಾಗಿ ಅಂತಿಮ ನಿರ್ಧಾರ ಕೈಗೊಂಡು ಬಿಜೆಪಿ ವಿರುದ್ಧ ಅಖಾಡಕ್ಕೆ ವಿಪಕ್ಷಗಳು ಎಂಟ್ರಿ ಕೊಡಲಿವೆ.
ಕೆಲವರು ಸಮಿತಿ ಬೇಡ ಅಂತಾರೆ!
ಅತ್ತ ಸಮಿತಿ ರಚನೆಗೆ ಕೆಲವು ವಿಪಕ್ಷಗಳು ಒಪ್ಪಿಗೆ ಸೂಚಿಸಿದ್ದರೆ, ಇನ್ನೂ ಕೆಲವು ವಿಪಕ್ಷಗಳ ನಾಯಕರು ಸಮಿತಿ ಬೇಡ ಅಂತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಗೊಂದಲ. ಹೌದು ಈ ಸಮಿತಿಗಳು ರಚನೆ ಆದ ನಂತರ, ವಿಪಕ್ಷಗಳ ನಡುವೆಯೇ ಭಿನ್ನಾಭಿಪ್ರಾಯ ಮೂಡಿದರೆ ಪರಿಣಾಮ ಏನು? ಅನ್ನೋ ಚಿಂತೆ ಕೂಡ ಎದುರಾಗಿದೆ. ಇದೇ ಕಾರಣಕ್ಕೆ ಕೆಲ ವಿಪಕ್ಷಗಳ ನಾಯಕರು ಸಮಿತಿಗಳ ರಚನೆ ಬೇಡ ಅಂತಿದ್ದಾರೆ. ಹೀಗೆ ಸಮಿತಿ ಬೇಕಾ? ಇಲ್ಲ ಬೇಡ್ವಾ? ಅನ್ನೋ ಗೊಂದಲದ ನಡುವೆ ವಿರೋಧ ಪಕ್ಷಗಳ ನಾಯಕರು ಮುಳುಗಿದ್ದಾರೆ. ಈ ಹಿನ್ನೆಲೆ ಸಮಸ್ಯೆ ಕೂಡ ಮತ್ತಷ್ಟು ಕಗ್ಗಂಟಾಗಿದೆ.

ವಿರೋಧ ಪಕ್ಷಗಳ ನಡುವೆ ಕಿರಿಕ್
ಬಿಹಾರದ ಸಿಎಂ ಕೂಡ ಆಗಿರುವ ನಿತೀಶ್ ಕುಮಾರ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳನ್ನ ಒಗ್ಗೂಡಿಸುತ್ತಿರುವ ನಾಯಕರೂ ಆಗಿದ್ದಾರೆ. ಹೀಗಾಗಿಯೇ ನಿತೀಶ್ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಹಾಗೂ ನಿತೀಶ್ ಮಾತಿಗೆ ಸಾಕಷ್ಟು ಬೆಲೆಯೂ ಇದೆ. ಈ ಹಿನ್ನೆಲೆ ನಿತೀಶ್ ಕುಮಾರ್ ಕೆಲ ದಿನಗಳ ಹಿಂದೆ ಒಂದು ಮಾತು ಹೇಳಿದ್ದರು. ಅದೇನೆಂದರೆ ವಿಪಕ್ಷಗಳ ಸಭೆಗೆ ಬರಲು ಒಪ್ಪುವ ಪಕ್ಷಗಳು ತಮ್ಮ ಪಕ್ಷದ ಮುಖ್ಯಸ್ಥರನ್ನೇ ಕಳುಹಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದರು ನಿತೀಶ್ ಕುಮಾರ್. ಈ ಮೂಲಕ ವಿರೋಧ ಪಕ್ಷಗಳ ನಡುವೆ ಕಿರಿಕ್ ತಣ್ಣಗೆ ಆಗಿಲ್ಲ ಅನ್ನೋದು ಸ್ಪಷ್ಟವಾಗಿತ್ತು.
ವಿಪಕ್ಷಗಳಿಗೆ ಬಿಜೆಪಿ ಬಿಗ್ ಶಾಕ್!
ಹೌದು, ಇಲ್ಲಿ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ವಿಧಾನಸಭೆಯ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಎಲ್ಲ ಕಾರಣಕ್ಕೆ ವಿಪಕ್ಷಗಳ ಒಗ್ಗಟ್ಟು ಮುರಿಯಲು ಬಿಜೆಪಿ ಯತ್ನಿಸುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಅಲ್ಲದೆ ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಎಲ್ಲಾ ಬೆಳವಣಿಗೆ ಬಗ್ಗೆ ವಿಪಕ್ಷಗಳ ನಾಯಕರು ಅಲರ್ಟ್ ಆಗಿದ್ದಾರೆ.

ಹೀಗೆ ವಿಪಕ್ಷ ನಾಯಕರು ತಮ್ಮ ಮಧ್ಯೆ ಭಿನ್ನಾಭಿಪ್ರಾಯ ಮರೆತು ಒಂದಾಗುವ ಮುನ್ಸೂಚನೆ ಕೂಡ ಸಿಕ್ಕಿತ್ತು. ಆ ಮೂಲಕ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿತ್ತು. ಈ ಕಾರಣಕ್ಕೆ ಕಾಂಗ್ರೆಸ್ ನೇತೃತ್ವ ತೋರಿಸುವುದು ಬೇಡ ಅನ್ನೋದು ಮಮತಾ ಬ್ಯಾನರ್ಜಿ ಪ್ಲ್ಯಾನ್ ಆಗಿತ್ತು ಎಂಬ ವಾದ ಕೂಡ ಇದೆ. ಆದರೆ ದಿಢೀರ್ ಜೂನ್ 12ರ ಸಭೆಯೇ ಮುಂದೂಡಿಕೆ ಆಗಿದೆ. ಈ ನಡುವೆ ಸಮಿತಿ ರಚಿಸಿ, ವಿಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಲು ಯತ್ನಿಸಲಾಗುತ್ತಿದೆ. ಇದೆಲ್ಲಾ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications