ಇರಾನ್ ನೆಲದಿಂದ ಭಾರತೀಯರ ರಕ್ಷಣೆಗೆ ಆಪರೇಷನ್ ಸ್ವದೇಶ್ ಆರಂಭ, ಮತ್ತೊಂದು ಭರ್ಜರಿ ಕಾರ್ಯಾಚರಣೆ Operation Swades
ಇರಾನ್ ದೇಶದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ಈ ಸಂದರ್ಭದಲ್ಲೇ ಇರಾನ್ ನೆಲದಲ್ಲಿ ವಾಸ ಮಾಡುತ್ತಿರುವ 10,000ಕ್ಕೂ ಹೆಚ್ಚು ಭಾರತೀಯರ ಕುರಿತು ಭಾರಿ ಕಳವಳ ವ್ಯಕ್ತವಾಗಿತ್ತು. ಅಲ್ಲದೆ ಅಮೆರಿಕ ಮತ್ತು ಇರಾನ್ ನಡುವೆ ನೇರವಾಗಿ ಯುದ್ಧ ಆರಂಭ ಆಗುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಇರಾನ್ ದೇಶದಲ್ಲಿ ಇರುವ ಭಾರತೀಯರ ರಕ್ಷಣೆಗೆ ಇದೀಗ ಕರ್ಯಾಚರಣೆಯನ್ನು ಆರಂಭಿಸಿದೆ.
'ಆಪರೇಷನ್ ಸ್ವದೇಶ್' ಮೂಲಕ ಇರಾನ್ ನೆಲದಿಂದ ಭಾರತೀಯರನ್ನು ಕರೆತರುವ ಪ್ರಯತ್ನ ಶುರು ಆಗಿದೆ. ಇರಾನ್ ನೆಲದಿಂದ ಭಾರತೀಯರನ್ನು ಹೊತ್ತು ಮೊದಲ ವಿಮಾನ ಇಂದು ದೆಹಲಿಗೆ ಆಗಮಿಸುತ್ತಿದೆ. ಇದೇ ರೀತಿ ಇನ್ನುಳಿದ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಈಗ 'ಆಪರೇಷನ್ ಸ್ವದೇಶ್' ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿಪರರು ಸೇರಿ ಸುಮಾರು 10,000 ಭಾರತೀಯ ನಾಗರಿಕರು ಇರಾನ್‌ನಲ್ಲಿದ್ದಾರೆ. ಈ ಪೈಕಿ ಸುಮಾರು 2,500 ದಿಂದ 3,000 ಭಾರತೀಯರು ವೈದ್ಯಕೀಯ ಅಧ್ಯಯನಕ್ಕೆ ಅಲ್ಲಿಗೆ ಹೋಗಿದ್ದಾರೆ. ವಿದೇಶಾಂಗ ಸಚಿವಾಲಯ ಇರಾನ್‌ಗೆ ಪ್ರಯಾಣಿಸದಂತೆ ಈಗಾಗಲೇ ಸಲಹೆ ಕೂಡ ನೀಡಿದ್ದು, ಹಿಂಸೆಯ ಹಿನ್ನೆಲೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಇಸ್ರೇಲ್ ಮತ್ತು ಅಮೆರಿಕ ಜೊತೆಗೆ ಯುದ್ಧ?
ಇರಾನ್ ರಾಜಧಾನಿ ತೆಹ್ರಾನ್ ಮೂಲಕ ವಿಮಾನ ಭಾರತಕ್ಕೆ ಆಗಮಿಸುತ್ತಿದ್ದು, ಇದೇ ರೀತಿಯಾಗ ಮತ್ತೆ ಹಲವು ವಿಮಾನಗಳನ್ನು ಭಾರತೀಯರನ್ನ ಕರೆದುಕೊಂಡು ಬರಲು ಕಳಿಸಲು ಸಿದ್ಧತೆ ನಡೆಸಲಾಗಿದೆ. ಭಾರತ ಸರ್ಕಾರ ಈ ಕಾರ್ಯಾಚರಣೆಗೆ 'ಆಪರೇಷನ್ ಸ್ವದೇಶ್' ಎಂಬ ಹೆಸರು ಇಟ್ಟಿದ್ದು, ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಕೂಡ ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬರಲು ಅಗತ್ಯ ಇರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಯಾವುದೇ ರೀತಿ ಸೇನಾ ಕಾರ್ಯಾಚರಣೆ ಇಲ್ಲ ಎಂದು ಹೇಳಿದ್ದಾರೆ. ಹೀಗಿದ್ದರು ಕೂಡ ಇರಾನ್ ಮಾತ್ರ ಇಸ್ರೇಲ್ ನೆಲವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ನಿಯೋಜನೆ ಮಾಡಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಕ್ರಮ ಕೈಗೊಂಡಿದ್ದು, ವಿಮಾನಗಳ ಮೂಲಕ ಭಾರತೀಯರನ್ನ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆದುಕೊಂಡು ಬರಲಾಗುತ್ತಿದೆ.
ಹಿಂಸಾಚಾರಕ್ಕೆ ಈವರೆಗೂ 3,400ಕ್ಕೂ ಹೆಚ್ಚು ಜನ ಬಲಿ
ಇರಾನ್ ನೆಲದಲ್ಲಿ ಹಿಂಸಾಚಾರ ಆರಂಭವಾಗಿ ಅರ್ಧ ತಿಂಗಳು ಕಳೆಯುತ್ತಿದ್ದು, ಕ್ಷಣಕ್ಷಣಕ್ಕೂ ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಇರಾನ್ ಪ್ರಜೆಗಳೇ ದೇಶಬಿಟ್ಟು ಪಲಾಯನ ಮಾಡ್ತಿದ್ದಾರೆ. ಆಡಳಿತ ವೈಫಲ್ಯದ ವಿರುದ್ಧ ಶುರುವಾದ ಪ್ರತಿಭಟನೆಗಳು ಘೋರ ರೂಪ ಪಡೆದು, ಈವರೆಗೂ ಸುಮಾರು 3,400ಕ್ಕೂ ಜನರನ್ನ ಬಲಿ ಪಡೆಯಲಾಗಿದೆ ಎಂಬ ಆರೋಪ ಇದೆ. ಹೀಗೆ ಇರಾನ್ ನೆಲದಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೋರಾಟ ಮಾಡಿದವರ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪವನ್ನ ಟ್ರಂಪ್ ಗಂಭೀರವಾಗಿ ಪರಿಗಣಿಸಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಮಹತ್ವದ ಕಾರ್ಯಾಚರಣೆ ಶುರು ಮಾಡಿದೆ.












Click it and Unblock the Notifications