ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ: ಸೋಮವಾರ ಮಂಡನೆ ಇಲ್ಲ
ನವದೆಹಲಿ, ಡಿಸೆಂಬರ್ 15: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡನೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಆದರೆ ಸೋಮವಾರ ಈ ಕುರಿತ ಮಸೂದೆ ಮಂಡನೆ ಮಾಡುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ'ಗೆ ಒಪ್ಪಿಗೆ ನೀಡಲಾಗಿತ್ತು. ಡಿಸೆಂಬರ್ 16ರ ಸೋಮವಾರ ಈ ಕುರಿತು ಲೋಕಸಭೆಯಲ್ಲಿ ಎರಡು ಮಸೂದೆ ಮಂಡನೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು.

ಸೋಮವಾರದ ಲೋಕಸಭೆ ಕಲಾಪದ ಪಟ್ಟಿಯಲ್ಲಿ ಈ ಮಸೂದೆ ಮಂಡನೆ ಮಾಡುವ ಕುರಿತು ಪಟ್ಟಿಯನ್ನು ತಯಾರು ಮಾಡಲಾಗಿತ್ತು. ಈಗಾಗಲೇ ಸರ್ಕಾರ ಕರಡು ಮಸೂದೆಯ ಪ್ರತಿಯನ್ನು ಸಂಸದರಿಗೆ ನೀಡಿದ್ದ, ಅವರಿಗೆ ಅಧ್ಯಯನ ಮಾಡಲು ಸಹ ಸೂಚನೆ ನೀಡಿದೆ.
ಸೋಮವಾರ ಮಂಡನೆ ಇಲ್ಲ: ಆದರೆ ಭಾನುವಾರ ಸಿಕ್ಕಿರುವ ಲೋಕಸಭೆಯ ಡಿಸೆಂಬರ್ 16, ಸೋಮವಾರದ ಕಲಾಪದ ಪಟ್ಟಿಯಲ್ಲಿ ಕೆಲವು ಬದಲಾವಣೆಯಾಗಿದೆ. ಇದರ ಪ್ರಕಾರ ಲೋಕಸಭೆಯಲ್ಲಿ ಸೋಮವಾರ 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತ ಮಸೂದೆ ಮಂಡನೆ ಆಗುವುದಿಲ್ಲ.
ಲೋಕಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 20ರಂದು ಅಂತ್ಯಗೊಳ್ಳಲಿದೆ. ಇದಕ್ಕೂ ಮೊದಲು ಮಸೂದೆ ಮಂಡಿಸಿ ಚರ್ಚೆ ನಡೆಸಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಡಿಸೆಂಬರ್ 16ರಂದು ಮಸೂದೆ ಮಂಡನೆ ಮಾಡದಿದ್ದರೆ ಸರ್ಕಾರದ ಬಳಿ ಮಸೂದೆ ಮಂಡನೆಗೆ ಕೇವಲ 3 ದಿನ ಉಳಿಯಲಿದೆ. ಆದ್ದರಿಂದ ಸರ್ಕಾರದ ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮಂಡನೆ ಮಾಡಲು ಒಪ್ಪಿಗೆ ಸಿಕ್ಕಿದ ಬಳಿಕ ಲೋಕಸಭೆ ಕಲಾಪದ ಸೋಮವಾರದ ಕಾರ್ಯಸೂಚಿಯಲ್ಲಿ ಮಸೂದೆ ಮಂಡನೆಯ ಅಂಶ ಸೇರಿಸಲಾಗಿತ್ತು. ಆದರೆ ಈಗ ಸೋಮವಾರ ಮಸೂದೆ ಮಂಡನೆಯಾಗುವುದಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ ಕೇಂದ್ರ ಕಾನೂನು ಸಚಿವ ಅರುಣ್ ಮೇಘವಾಲ್ ಲೋಕಸಭೆಯಲ್ಲಿ ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಿದ್ದಾರೆ.
'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ವರದಿ ನೀಡಲು ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಈಗಾಗಲೇ ಸರ್ಕಾರಕ್ಕೆ 18 ಸಾವಿರಕ್ಕೂ ಅಧಿಕ ಪುಟದ ವರದಿ ಸಲ್ಲಿಕೆ ಮಾಡಿದೆ. ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ನೀಡಲಾಗಿದ್ದು, ಮೊದಲು ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆಯಬೇಕಿದೆ.
ದೇಶದಲ್ಲಿ ಚುನಾವಣೆಗಾಗಿ ಮಾಡುತ್ತಿರುವ ವೆಚ್ಚಕ್ಕೆ 'ಒಂದು ರಾಷ್ಟ್ರ, ಒಂದು ಚುನಾವಣೆ' ಮೂಲಕ ಕಡಿವಾಣ ಬೀಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ 'ಇಂಡಿಯಾ' ಮೈತ್ರಿಕೂಟದಲ್ಲಿರುವ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುತ್ತಿವೆ. ಇದು ಸಣ್ಣ ಪಕ್ಷಗಳನ್ನು ಮುಗಿಸಲು ರೂಪಿಸಿರುವ ಸಂಚು ಎಂದು ಆರೋಪಿಸುತ್ತಿವೆ. ಮಸೂದೆ ಮಂಡನೆಯಾದಲ್ಲಿ ಒಟ್ಟಾಗಿ ಅದನ್ನು ವಿರೋಧಿಸಲು 'ಇಂಡಿಯಾ' ಮೈತ್ರಿಕೂಟ ತೀರ್ಮಾನಿಸಿದೆ.












Click it and Unblock the Notifications